ಕಾನೂನುಬಾಹಿರ ಪ್ರತಿಭಟನೆ, ಸಿದ್ದರಾಮಯ್ಯ ಪ್ರತಿಕೃತಿ ದಹನ ಪ್ರಕರಣ: ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧದ ಎಫ್‌ಐಆರ್ ರದ್ದು
ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ
ಬೆಂಗಳೂರು: ಕಾನೂನುಬಾಹಿರವಾಗಿ ಪ್ರತಿಭಟನೆ ನಡೆಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹನ ಮಾಡಿದ ಆರೋಪದಲ್ಲಿ ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಮತ್ತಿತರರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಉಡುಪಿಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ರದ್ದು ಕೋರಿ ಗಿರೀಶ್ ಎಂ. ಅಂಚನ್, ಯಶ್‌ಪಾಲ್ ಸುವರ್ಣ ಸೇರಿ 10 ಮಂದಿ ಸಲ್ಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪುರಸ್ಕರಿಸಿದೆ.
ಘಟನೆಯಲ್ಲಿ ಅರ್ಜಿದಾರರ ಪಾತ್ರ ತೋರಿಸುವ ಯಾವುದೇ ನೇರ ಸಾಕ್ಷ್ಯಾಧಾರಗಳಿಲ್ಲ. ಯಾವುದೇ ಸಾಕ್ಷ್ಯವಿಲ್ಲದೆ ಮುಂದಿನ ತನಿಖೆಗೆ ಅನುಮತಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ. ಈ ನಿಟ್ಟಿನಲ್ಲಿ ಅರ್ಜಿಯನ್ನು ಪುರಸ್ಕರಿಸಲಾಗಿದ್ದು, ಅರ್ಜಿದಾರರ ವಿರುದ್ಧದ ಎಫ್‌ಐಆರ್ ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಕರಣ ಸಂಬಂಧ ದಾಖಲಾಗಿರುವ ಸಂಗತಿಗಳೆಲ್ಲವೂ ದಾಖಲೆಗಳಲ್ಲಿವೆ. ಪ್ರಾಸಿಕ್ಯೂಷನ್ ಪ್ರಕಾರ 2024ರ ಸೆಪ್ಟೆಂಬರ್ 6ರಂದು ಘಟನೆ ನಡೆದಿದ್ದು, ಶಾಲಾ ಶಿಕ್ಷಕರೊಬ್ಬರಿಗೆ ಪ್ರಶಸ್ತಿ ತಡೆಹಿಡಿದಿರುವುದನ್ನು ವಿರೋಧಿಸಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಆದರೆ, ಇದು ಅರ್ಜಿದಾರರನ್ನು ಪ್ರತಿಕೃತಿ ದಹನಕ್ಕೆ ನೇರವಾಗಿ ಲಿಂಕ್ ಮಾಡುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ವಾದ ಮಂಡಿಸಿದ್ದ ಅರ್ಜಿದಾರರ ಪರ ವಕೀಲ ನಿಶಿತ್ ಕುಮಾರ್ ಶೆಟ್ಟಿ, ಯಾವುದೇ ಕೃತ್ಯ ಎಸಗಲು ಸಂಘಟಿತ ಪ್ರತಿಭಟನೆ ನಡೆಸಿರಲಿಲ್ಲ. ಅದೊಂದು ಸ್ವಯಂಪ್ರೇರಿತ ಪ್ರತಿಭಟನೆಯಾಗಿತ್ತು. ಅದರಲ್ಲಿ ಅರ್ಜಿದಾರರು ಭಾಗಿಯಾಗಿರಲಿಲ್ಲ ಹಾಗೂ ಅರ್ಜಿದಾರರ ವಿರುದ್ಧ ಪ್ರಾಸಿಕ್ಯೂಷನ್ ಹೊರಿಸಿರುವ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪ್ರಕರಣವೇನು?
ಕುಂದಾಪುರದ ಶಾಲೆಯೊಂದರ ಪ್ರಾಂಶುಪಾಲರಿಗೆ ರಾಜ್ಯ ಪ್ರಶಸ್ತಿಯನ್ನು ತಡೆಹಿಡಿದಿರುವುದನ್ನು ವಿರೋಧಿಸಿ ಅರ್ಜಿದಾರರು ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಲ್ಲಿ ಕಾನೂನುಬಾಹಿರ ಪ್ರತಿಭಟನೆ ಆಯೋಜಿಸಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಸ್ವಯಂಸೇವಕರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿದ್ದರು ಎಂಬ ಆರೋಪವಿದೆ.
ಈ ಸಂಬಂಧ 2024ರ ಸೆಪ್ಟೆಂಬರ್ 7ರಂದು ಮಣಿಪಾಲ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ ಸೌರಭ್ ಬಲ್ಲಾಳ ಎಂಬವರು, ಸೆಪ್ಟೆಂಬರ್ 6ರಂದು ಸಂಜೆ 4 ಗಂಟೆ ಸುಮಾರಿಗೆ ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಬಿಜೆಪಿ ಕಾರ್ಯಕರ್ತರು ಅಕ್ರಮ ಕೂಟ ಸೇರಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಆರೋಪಿತರು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗುತ್ತ ಅವರ ಪ್ರತಿಕೃತಿಯನ್ನು ಸಿಂಡಿಕೇಟ್ ಸರ್ಕಲ್‌ನ ಮಧ್ಯಭಾಗದಲ್ಲಿ ತಂದು ಬೆಂಕಿ ಹಚ್ಚಿದ್ದಾರೆ. ಈ ಮೂಲಕ ಗುಂಪುಗಳ ನಡುವೆ ದ್ವೇಷ ಮೂಡುವಂತೆ ಮಾಡಿ, ಶಾಂತಿ ಭಂಗ ತರುವ ಉದ್ದೇಶದಿಂದ ಮುಖ್ಯಮಂತ್ರಿಗಳನ್ನು ಅವಮಾನಿಸಿದ್ದಲ್ಲದೇ, ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡಿ ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದರು.
ದೂರು ಆಧರಿಸಿ ಶಾಸಕ ಯಶ್‌ಪಾಲ್ ಸುವರ್ಣ (4ನೇ ಆರೋಪಿ) ಮತ್ತಿತರರ ವಿರುದ್ಧ ಬಿಎನ್‌ಎಸ್ ಸೆಕ್ಷನ್ 192 (ಕಾನೂನುಬಾಹಿರ ಕೂಟ), 196(1) (ಗಲಭೆ), ಸೆಕ್ಷನ್ 352 (ಸಾರ್ವಜನಿಕ ಸೇವಕರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದು) ಹಾಗೂ ಸೆಕ್ಷನ್ 353(1)(ಸಿ) (ಸಾರ್ವಜನಿಕ ಸೇವಕರಿಗೆ ಸುಳ್ಳು ಮಾಹಿತಿ ನೀಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಕರಣವು ಪ್ರಸ್ತುತ ಉಡುಪಿಯ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಎಸಿಜೆಎಂ ನ್ಯಾಯಾಲಯದ ಮುಂದೆ ವಿಚಾರಣಾ ಹಂತದಲ್ಲಿತ್ತು.