ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ: ಮೋಹನ್ ಭಾಗವತ್ ಹೇಳಿಕೆಗೆ ಸಿಎಂ ಸಿದ್ಧರಾಮಯ್ಯ ತಿರುಗೇಟು
ಮೈಸೂರು : ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವೇ ಇಲ್ಲ ಎಂದು ಆರೆಸ್ಸೆಸ್ ಸಂಚಾಲಕ ಮೋಹನ್ ಭಾಗವತ್ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ಬಹುತ್ವದಿಂದ ಕೂಡಿದ ದೇಶ. ಆದರೆ ಆರೆಸ್ಸೆಸ್ ಮತ್ತು ಜನಸಂಘ ಹಿಂದಿನಿಂದಲೂ ಹಿಂದೂ ರಾಷ್ಟ್ರ ಮಾಡಬೇಕು ಎಂದು ಹೇಳುತ್ತಿದೆ. ಅದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.
ನಮ್ಮ ದೇಶದಲ್ಲಿ ಎಲ್ಲಾ ಜಾತಿ, ಧರ್ಮದವರು ಇದ್ದಾರೆ. ಹಲವಾರು ಭಾಷೆ, ಸಂಸ್ಕೃತಿಯನ್ನು ಒಳಗೊಂಡ ಬಹುತ್ವ ದೇಶ, ಇಲ್ಲಿ ಒಂದೇ ತರಹದ ಜನರು ಇಲ್ಲ, ಎಲ್ಲರನ್ನು ಒಳಗೊಂಡ ದೇಶ ಆಗಿರುವುದರಿಂದ ಒಂದು ಧರ್ಮದ ದೇಶ ಆಗಲು ಸಾಧ್ಯವಿಲ್ಲ ಎಂದರು.
ಹಿಂದೂ ರಾಷ್ಟ್ರ ಎಂದು ಹೇಳುವ ಆರೆಸ್ಸೆಸ್ ನವರು ಏಕೆ ಅಸ್ಪೃಶ್ಯತೆ, ಅಸಮಾನತೆ ಬಗ್ಗೆ ಮಾತನಾಡುವುದಿಲ್ಲ? ಇದರ ಬಗ್ಗೆಯೂ ಅವರು ಮಾತನಾಡಲಿ ಎಂದು ಆಗ್ರಹಿಸಿದರು.
15 ರಂದು ದೆಹಲಿಗೆ :
ಕೇಂದ್ರದ ಮಾಜಿ ಸಚಿವ ಮತ್ತು ವಕೀಲ ಕಪಿಲ್ ಸಿಬಲ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ನ.15 ರಂದು ದೆಹಲಿಗೆ ಹೋಗುತ್ತಿದ್ದೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಅಂದೇ ವಾಪಸ್ ಬರಬೇಕು ಎಂದುಕೊಂಡಿದ್ದೇನೆ. ಹೈಕಮಾಂಡ್ ಭೇಟಿಗೆ ಸಮಯ ಕೇಳುತ್ತೇನೆ. ಅವರು ಸಮಯ ಕೊಟ್ಟರೆ ಭೇಟಿಯಾಗುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಕೆ.ಹರೀಶ್ ಗೌಡ, ಗಣೇಶ್ ಪ್ರಸಾದ್, ಡಿ.ರವಿಶಂಕರ್, ವಿಧಾನಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಡಾ.ಕೆ.ಶಿವಕುಮಾರ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಉಪಸ್ಥಿತರಿದ್ದರು.