ಮತ್ತೆ ಬೆದರಿಕೆಗಳು ಮುಂದುವರಿದಿವೆ, ಆದರೆ ಇದ್ಯಾವುದಕ್ಕೂ ನಾನು ಭಯಪಡುವುದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ (Photo: PTI)
ಕಲಬುರಗಿ: ಪ್ರತಿದಿನವೂ ಹೊಸ ಪುರಾವೆಗಳು ಬೆಳಕಿಗೆ ಬರುತ್ತಿದ್ದು, ಮತ್ತೆ ಬೆದರಿಕೆಗಳು ಮುಂದುವರಿದಿವೆ, ಆದರೆ ಇದ್ಯಾವುದಕ್ಕೂ ನಾನು ಭಯಪಡುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾತೆಯಿಂದ ವೀಡಿಯೊವೊಂದನ್ನು ಪೋಸ್ಟ್ ಮಾಡಿದ ಅವರು, ನಿನ್ನೆ, ಬಿಜೆಪಿಯ ನೀಲಿ ಕಣ್ಣಿನ ಹುಡುಗ ಮತ್ತು ಬಿಜೆಪಿ ಚಿತ್ತಾಪುರ ಶಾಸಕ ಅಭ್ಯರ್ಥಿ, ".... ಈಗ ನಿಮಗೆ ಫೋನ್ ಮೂಲಕ ಮಾತ್ರ ಬೆದರಿಕೆ ಹಾಕಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ, ಆರೆಸ್ಸೆಸ್ ನಿಮ್ಮ ಮನೆಗೆ ನೇರವಾಗಿ ಬರುತ್ತದೆ, ಆರೆಸ್ಸೆಸ್ ನವರು ಕಟ್ಟರ್ ಪಂಥೀಯರು ಮತ್ತು ದೇಶ ಭಕ್ತರು ..." ಎಂದು ಎಚ್ಚರಿಕೆ ನೀಡಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಿಮ್ಮ ಗೂಂಡಾಗಳು ಪ್ರಯತ್ನ ಮುಂದುವರಿಸಲಿ. ನಾನು ವಾಸವಾಗಿರುವುದು ಎಲ್ಲಿ ಎಂಬುದು ನಿಮಗೂ ತಿಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಟ್ಯಾಗ್ ಮಾಡಿ ಬರೆದುಕೊಂಡಿದ್ದಾರೆ.
ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಠೋಡ್ ಮೊನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನಿನ್ನೆ ಕರೆ ಬಂದಿರಬಹುದು. ಒಂದು ವೇಳೆ ಹೀಗೆ ಮುಂದುವರೆದರೆ ನಿಮ್ಮ ಮನೆಯವರೆಗೂ ಆರೆಸ್ಸೆಸ್ ನವರು ಬರಬಹುದು ಎನ್ನುವ ಮೂಲಕ ಎಚ್ಚರಿಕೆ ನೀಡಿದ್ದರು. ಇದೇ ವಿಡಿಯೋವನ್ನು ತಮ್ಮ ಟ್ವೀಟ್ ನಲ್ಲಿ ಹಾಕಿ, ಬಿಜೆಪಿಯ ನೀಲಿ ಕಣ್ಣಿನ ಹುಡುಗನಿಗೆ ಭಯಪಡುವುದಿಲ್ಲ ಎಂದು ಹೇಳಿದ್ದಾರೆ.
ಅವರು ಫೋನ್ ಕರೆಗಳ ಮೂಲಕ ಬೆದರಿಸಲು ಪ್ರಯತ್ನಿಸಿದ್ದರು. ಆದರೆ ಅದು ವಿಫಲವಾದಾಗ ಅವರ ಧಮಕಿ ಇನ್ನಷ್ಟು ವಿಪರೀತವಾಗುತ್ತದೆ ಎಂದೂ ಅವರು ಬರೆದುಕೊಂಡಿದ್ದಾರೆ.