ವಿಶ್ವ ಆರ್ಥಿಕ ನಿಯೋಗದಿಂದ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಭೇಟಿ
ಬೆಂಗಳೂರು : ಸ್ವಿಟ್ಜರ್ಲೆಂಡ್‌ನ ಜಿನಿವಾ ಮೂಲದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ದಕ್ಷಿಣ ಏಷ್ಯಾದ ಬಿಸಿನೆಸ್ ಎಂಗೇಜ್‍ಮೆಂಟ್ ಮುಖ್ಯಸ್ಥೆ ಅದಿತಿ ವ್ಯಾಸ್ ಅವರ ನೇತೃತ್ವದ ನಿಯೋಗವು ಗುರುವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು.
ಭಾರತ ಮತ್ತು ಸ್ವಿಟ್ಜರ್ಲೆಂಡ್ ಮಧ್ಯೆ ಆಗಿರುವ ಮುಕ್ತ ವ್ಯಾಪಾರ ಒಪ್ಪಂದದ (ಎಫ್‍ಟಿಎ) ಪ್ರಯೋಜನಗಳನ್ನು ಕರ್ನಾಟಕವು ಪಡೆದುಕೊಳ್ಳುವ ಸಾಧ್ಯತೆಗಳನ್ನು ನಿಯೋಗವು ಸಚಿವರ ಜೊತೆ ಚರ್ಚಿಸಿತು. ಈ ‘ಎಫ್‍ಟಿಎ’ದ ಪ್ರಯೋಜನ ಪಡೆದುಕೊಳ್ಳಲು ಸ್ವಿಟ್ಜರ್ಲೆಂಡ್ ಹಾಗೂ ಕರ್ನಾಟಕ ಸರಕಾರವು ವ್ಯಾಪಾರ, ವಾಣಿಜ್ಯ, ಬಂಡವಾಳ ಹೂಡಿಕೆ ಕ್ಷೇತ್ರಗಳಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಈ ಒಪ್ಪಂದದ ಫಲವಾಗಿ ಸ್ವಿಟ್ಜರ್ಲೆಂಡ್ ನ ಬಹುಪಾಲು ಉದ್ದಿಮೆಗಳು ಭಾರತದಲ್ಲಿ ತಮ್ಮ ವಹಿವಾಟು ಹಾಗೂ ನೆಲೆ ವಿಸ್ತರಿಸಲು ಮುಂದಾಗಲಿವೆ. ಇದರಿಂದ ಭಾರತಕ್ಕೆ ವಿದೇಶಿ ನೇರ ಬಂಡವಾಳ (ಎಫ್‍ಡಿಐ) ಗಮನಾರ್ಹವಾಗಿ ಹರಿದು ಬರಲಿದೆ. ‘ಎಫ್‍ಡಿಐ’ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿ ಇರುವ ಕರ್ನಾಟಕಕ್ಕೆ ಇದರಿಂದ ಹೆಚ್ಚಿನ ಪ್ರಯೋಜನ ಲಭಿಸಲಿದೆ.
ಸ್ವಿಟ್ಜರ್ಲೆಂಡ್ ನ ಕಂಪನಿಗಳು ನಾವೀನ್ಯತೆಯಲ್ಲಿ ಪ್ರಾವೀಣ್ಯತೆ ಸಾಧಿಸಿವೆ. ಅಲ್ಲಿ ತಯಾರಿಕಾ ವಲಯದ ವಿಸ್ತರಣೆಗೆ ಅವಕಾಶಗಳಿಲ್ಲ. ಕರ್ನಾಟಕದಲ್ಲಿ ಇರುವ ತಯಾರಿಕಾ ವಲಯದಲ್ಲಿನ ವಿಪುಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿಯೂ ‘ಡಬ್ಲ್ಯುಇಎಫ್’ನ ನಿಯೋಗವು ಭಾಗವಹಿಸಿತ್ತು. 2024ರಲ್ಲಿ ದಾವೋಸ್‍ನಲ್ಲಿ ನಡೆದಿದ್ದ ಸಮಾವೇಶದಲ್ಲಿ ಭಾಗವಹಿಸಿದ್ದ ಸಚಿವ ಎಂ.ಬಿ.ಪಾಟೀಲ್ ತಮ್ಮ ಅನುಭವವನ್ನು ನಿಯೋಗದ ಜೊತೆ ಹಂಚಿಕೊಂಡರು.
ದಾವೋಸ್ ಸಮಾವೇಶದ ಫಲವಾಗಿ ಕೈಗಾರಿಕೆ, ಉದ್ದಿಮೆ-ವಹಿವಾಟು ಹಾಗೂ ಬಂಡವಾಳ ಹೂಡಿಕೆಯ ಹೊಸ ಅವಕಾಶಗಳು ಕರ್ನಾಟಕಕ್ಕೆ ಒದಗಿ ಬಂದಿವೆ. ಇದರಿಂದ ಸಂಪತ್ತು ಹಾಗೂ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ. ವಿಶ್ವ ಆರ್ಥಿಕ ವೇದಿಕೆಯು ಭಾರತದಲ್ಲಿ 50 ಪಾಲುದಾರರನ್ನು ಹೊಂದಿದೆ ಎಂದು ಅದಿತಿ ವ್ಯಾಸ್ ಹೇಳಿದರು.
ಸೌದಿ ಅರೇಬಿಯಾದಲ್ಲಿಯೂ ಪ್ರತಿ ಎರಡು ವರ್ಷಕ್ಕೊಮ್ಮೆ ಡಬ್ಲ್ಯುಇಎಫ್ ಸಮಾವೇಶ ಸಂಘಟಿಸುತ್ತಿರುವುದನ್ನು ನಿಯೋಗವು ಸಚಿವರ ಗಮನಕ್ಕೆ ತಂದಿತು. ದಾವೋಸ್ ಸಮಾವೇಶದಲ್ಲಿ ಭಾಗವಹಿಸುತ್ತ ಬಂದಿರುವ ಕರ್ನಾಟಕವು ದಾವೋಸ್ ಸಮಾವೇಶದಲ್ಲಿ ಭಾಗವಹಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಹೊಸ ಕೈಗಾರಿಕೆಗಳ ಕ್ಲಸ್ಟರ್‍ಗಳ ಸ್ಥಾಪನೆ, ಪರಿಶುದ್ಧ ಜಲಜನಕ ಮತ್ತಿತರ ಕ್ಷೇತ್ರಗಳಲ್ಲಿ ಹೊಸ ಉದ್ದಿಮೆ ಅವಕಾಶಗಳ ಬಗ್ಗೆ ಸ್ವಿಟ್ಜರ್ಲೆಂಡ್ ಮತ್ತು ಕರ್ನಾಟಕದ ಪಾಲುದಾರಿಕೆಗೆ ವಿಪುಲ ಅವಕಾಶಗಳು ಇವೆ ಎಂದು ಅದಿತಿ ವ್ಯಾಸ್ ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಕೆಎಸ್‍ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ, ಡಬ್ಲ್ಯುಇಎಫ್‍ನ ಬಿಸಿನೆಸ್ ಡೆವಲಪ್‍ಮೆಂಟ್ ಅಧಿಕಾರಿ ಪರ್ವ್ ಬನ್ಸಲ್ ಮತ್ತು ಟೆಕ್ನಾಲಜಿ ಪಯನಿಯರ್ ಅಲೋಕ್ ಮೆಡಿಕೆಪುರ ಅನಿಲ್ ಉಪಸ್ಥಿತರಿದ್ದರು.