ಆನೆ-ಮಾನವ ಸಂಘರ್ಷ ಇನ್ನೆಷ್ಟು ದಿನ?
ಬೆಳಗ್ಗೆದ್ದು ಹಾಲಿನ ಡೈರಿಗೆ, ಓದಿಗೆ, ದುಡಿಮೆಗೆ, ಸೊಪ್ಪು ಕಟ್ಟಿಗೆಗೆ, ಬುಟ್ಟಿ ಮಾಡುವವರು ಬಳ್ಳಿಗೆ... ಹೀಗೆ ಕಾಡು ದಾರಿಯಲ್ಲಿ ನಡೆವವರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನಿಮಗೆ ಗೊತ್ತಿರಬೇಕು, ಹಳ್ಳಿಯ ಯಾವುದೇ ರಸ್ತೆ ರಾಜರಸ್ತೆಗಳಲ್ಲ. ಇಕ್ಕಟ್ಟಾದ ಏಕಮುಖ ರಸ್ತೆಗಳು. ಅಂತಹ ಕಾಡು ದಾರಿಗಳಲ್ಲಿ ರಾತ್ರಿ ಬಿಡಿ, ಹಗಲು ಹೊತ್ತೇ ಸಮ್ಮುಖದಲ್ಲಿ ಇದ್ದಕ್ಕಿದ್ದಂತೆ ಆನೆ ಪ್ರತ್ಯಕ್ಷವಾದರೆ ಗಾಡಿ ತಿರುಗಿಸಿ ವಾಪಸ್ ಬರಲಾರದೆ ತಪ್ಪಿಸಿಕೊಳ್ಳಲಾರದೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳೇ ಹೆಚ್ಚು.
ನಮ್ಮೂರು ಬಹಳ ದೊಡ್ಡದೇನಲ್ಲ, ಭೌಗೋಳಿಕವಾಗಿ ಕಣಿಯಾರುಮಲೆ ಎಂಬ ಕಾಡೊಂದು ನಮ್ಮೂರ ನಡುಭಾಗದಲ್ಲೆಲ್ಲ ಹರಡಿಕೊಂಡು ಅನೇಕ ಕಾರಣಗಳಿಗಾಗಿ ಅದು ನಮ್ಮ ಭಾಗ್ಯವೆಂದೇ ಭಾವಿಸಿಕೊಂಡಿದ್ದೆವು. ಮೇಲ್ನೋಟಕ್ಕೆ ಈ ಮಲೆ ಹಸಿರು ಹಸಿರಾಗಿದ್ದರೂ ಭಾಗಶಃ ಒಳಗಡೆಯೆಲ್ಲಾ ಮರಗಳ್ಳರ ದೆಸೆಯಿಂದ ಪೊಳ್ಳೇ. ಇಷ್ಟಾದರೂ ಮಳೆಬೆಳೆ, ಒಳ್ಳೆಯ ಗಾಳಿ, ಹಸಿರು ಆವರಣಕ್ಕಾಗಿ ಈ ಕಾಡು ನಮ್ಮ ಅಕ್ಕ ಪಕ್ಕದ ಹಳ್ಳಿಗಳಿಗೂ ವರವಾಗಿಯೇ ಇತ್ತು. ಈ ಕಾಡೊಳಗಡೆ ಹಾದು ಹೋಗುವ ರಸ್ತೆಯಲ್ಲಿ ಕಣಿಯಾರು, ಇಳಂತಾಜೆ, ದೇರ್ಲ, ಕೊಳ್ತಿಗೆ, ಪೆರ್ಲಂಪಾಡಿ, ಅಂಮಿಚಿಡ್ಕ ಮುಂತಾದ ಊರುಗಳಿಗೆ ಸೇರುವ ಕೂಡುರಸ್ತೆಗಳಲ್ಲಿ ಬೇಸಿಗೆ ಮಳೆಗಾಲದಲ್ಲಿ ಹಾದುಹೋಗುವುದೇ ಒಂದು ಅದ್ಭುತ ಸುಖ. ಭಾಗಶಃ ಅಭಿವೃದ್ಧಿಯ ವಿಕೃತಿಯಿಲ್ಲದೆ ಹಸಿರೇ ತುಂಬಿರುವ ಮೈಲುದ್ದದ ಆ ರಸ್ತೆಗಳಲ್ಲಿ ಗಾಡಿಯಲ್ಲೋ ನಡೆದು ಹೋಗುವಾಗಲೋ ಆಗುತ್ತಿದ್ದ ಅನುಭವವೇ ಬೇರೆ. ಆ ರಸ್ತೆಯುದ್ದ ಬಸ್ಸುಗಳೂ ಓಡಾಡುತ್ತಿದ್ದವು, ರೈತಾಪಿಗಳು, ಶಾಲಾ ಮಕ್ಕಳು, ಕೂಲಿ ಕಾರ್ಮಿಕರು, ರಬ್ಬರ್ ಟ್ಯಾಪರ್‌ಗಳು, ವ್ಯಾಪಾರಿಗಳು ದಿನವಹಿ ಆ ರಸ್ತೆಯಲ್ಲಿ ಓಡಾಡುತ್ತಿದ್ದರು. ಕಾಡನ್ನು ಸಿಗಿದು ಚಲಿಸುತ್ತಿದ್ದ ಆ ರಸ್ತೆಗಳು ಪರಸ್ಪರ ಊರು ಸೇರಿಸಿ ಆ ಚಲನೆಯಲ್ಲಿ ಒಂದು ಹಸಿರಿನ ತಂಪಿನ ನಿರಾಳತೆ ಸಿಗುತ್ತಿತ್ತು. ಎಷ್ಟೋ ಸಲ ಮನೆಗೆ ಬಂದ ಗೆಳೆಯರನ್ನು ನಮ್ಮೂರಿನ ಕಾಡು ತೋರಿಸುವ ಉಮೇದಿನಿಂದ ಸುತ್ತು ಬಳಸಿ ಅದೇ ದಾರಿಯಲ್ಲಿ ಕರೆದೊಯ್ದದ್ದೂ ಇದೆ.
ಈ ಸುಖಕ್ಕೆ ಈಗ ಬ್ರೇಕ್ ಬಿದ್ದಿದೆ. ಊರು ಸೇರಲು ಕಾಡುಪ್ರವೇಶಿಸುವ ಪ್ರತಿಯೊಬ್ಬರಿಗೂ ಮೊನ್ನೆಯಿಂದ ಆತಂಕವೊಂದು ಬಲವಾಗಿದೆ. ಇದೇ ಕಾಡಿನ ಸರಹದ್ದಿನ ರಬ್ಬರ್ ತೋಟದಲ್ಲಿ ಮೊನ್ನೆ ಕಾಡಾನೆ ಒಬ್ಬರನ್ನು ಕೊಂದುಹಾಕಿದೆ. ಕೊಡಗು, ಸಕಲೇಶಪುರ, ಹಾಸನ ಚಾಮರಾಜನಗರದಂತೆ ನಮ್ಮೂರಲ್ಲೂ ಕಾಡಾನೆ-ಕಾಡುಮೃಗಗಳ ಭೀತಿ ಪರಾಕಾಷ್ಠೆ ತಲುಪಿದೆ. ರಬ್ಬರ್ ಟ್ಯಾಪಿಂಗ್‌ಗೆ ತೊಡಗಿಕೊಂಡಿದ್ದ ಸೆಲ್ಲಮ್ಮ ಎಂಬವರನ್ನು ಮೊನ್ನೆ ಆನೆ ಕೊಂದು ಮಲಗಿಸಿದೆ.
ಈ ಆನೆ ಕಳೆದ ಆರೇಳು ತಿಂಗಳಿಂದ ನಮ್ಮೂರ ಆಸುಪಾಸಿನಲ್ಲಿ ಸುತ್ತಾಡುತ್ತಲೇ ಇತ್ತು. ಆ ಮನೆಯ ಗೋಡೆ ಜರಿದಿದೆ, ಇನ್ನೊಂದು ಕಡೆ ಅರೇಳು ತೆಂಗಿನ ಗಿಡಗಳನ್ನು ಕಬಳಿಸಿದೆ, ಮತ್ತೊಂದು ಕಡೆ ಹಲಸಿನ ಹಣ್ಣನ್ನು ಕಿತ್ತಿದೆ.... ಹೀಗೆಲ್ಲ ಸುದ್ದಿ ಬರುತ್ತಿತ್ತೇ ಹೊರತು ಆನೆಯನ್ನು ಹತ್ತಿರದಲ್ಲಿ ನಿಂತು ನೋಡಿದವರು ಇರಲಿಲ್ಲ, ಹಾಗೆ ಅದು ಮನುಷ್ಯರನ್ನು ಮುಟ್ಟಿದ ದಾಖಲೆಗಳಿರಲಿಲ್ಲ. ದಟ್ಟ ಕಣಿಯಾರು ಮಲೆ ಕಾಡಿನಲ್ಲಿ ಅವಿತಿದ್ದ ಆನೆ ರಾತ್ರೋರಾತ್ರಿ ಮೆಲ್ಲನೆ ಹೊರನುಸುಳಿ ರಸ್ತೆಗೆ ಸರಿದು ಅಕ್ಕ ಪಕ್ಕದಲ್ಲಿ ತನಗೆ ಬೇಕಾದನ್ನು ತಿಂದು ವಾಪಸ್ ನಯವಾಗಿ ಕಾಡಿಗೆ ಸರಿಯುತ್ತಿತ್ತು. ಎಲ್ಲೂ ಮನುಷ್ಯನಿಗೆ ಎದುರು ಬದುರಾಗದ, ತೊಂದರೆ ಕೊಡದ ಈ ಆನೆಗೆ ನಮ್ಮೂರ ಜನ ‘ಪಾಪದ ಆನೆ’ ಎಂದೇ ಪಟ್ಟ ಕಟ್ಟಿದ್ದರು. ಕೇರಳದ ಕಡೆಯಿಂದ ಯಾರೋ ತಂದು ಬಿಟ್ಟರಂತೆ, ಸಾಕಿದ ಆನೆಯಂತೆ, ಆ ಕಾರಣಕ್ಕಾಗಿಯೇ ಭಯಭೀತಗೊಳಿಸದ ಆನೆಯನ್ನು ಜನ ಅರೆ ಊರಾನೆ, ಅರೆ ಕಾಡಾನೆ ಎಂದೇ ಅರೆಬರೆ ಭಾವಿಸಿ ಇಡೀ ಊರು ಅಲ್ಪ ಮಟ್ಟಿಗೆ ನಿಶ್ಚಿಂತೆಯಿಂದಲೇ ಇತ್ತು. ಆಗಾಗ ಪತ್ರಿಕೆಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಬೆಳಗೆದ್ದು ಆನೆಯಿಂದ ಕೃಷಿ ನಷ್ಟಗೊಂಡವರು ಸುದ್ದಿ ಹಂಚಿ ಆನೆಕತೆಯನ್ನು ನೆನಪಿಸುತ್ತಿದ್ದರು. ಆ ಕ್ಷಣಕ್ಕೆಲ್ಲ ಅರಣ್ಯ ಇಲಾಖೆಯವರು ಊರವಾಸಿಗಳಿಗೆ ಎಚ್ಚರಿಕೆ ನೀಡಿ ಪಟಾಕಿ ಸಿಡಿಸಿದ್ದೂ ಇದೆ.
ಇದೀಗ ನಡೆದ ಕಥೆಯೇ ಬೇರೆ. ಇಡೀ ಊರಿಗೆ ಊರೇ ಬೆಚ್ಚಿ ಬಿದ್ದಿದೆ. ಬೆಳಗ್ಗೆದ್ದು ಹಾಲಿನ ಡೈರಿಗೆ, ಓದಿಗೆ, ದುಡಿಮೆಗೆ, ಸೊಪ್ಪು ಕಟ್ಟಿಗೆಗೆ, ಬುಟ್ಟಿ ಮಾಡುವವರು ಬಳ್ಳಿಗೆ... ಹೀಗೆ ಕಾಡು ದಾರಿಯಲ್ಲಿ ನಡೆವವರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನಿಮಗೆ ಗೊತ್ತಿರಬೇಕು, ಹಳ್ಳಿಯ ಯಾವುದೇ ರಸ್ತೆ ರಾಜರಸ್ತೆಗಳಲ್ಲ. ಇಕ್ಕಟ್ಟಾದ ಏಕಮುಖ ರಸ್ತೆಗಳು. ಅಂತಹ ಕಾಡು ದಾರಿಗಳಲ್ಲಿ ರಾತ್ರಿ ಬಿಡಿ, ಹಗಲು ಹೊತ್ತೇ ಸಮ್ಮುಖದಲ್ಲಿ ಇದ್ದಕ್ಕಿದ್ದಂತೆ ಆನೆ ಪ್ರತ್ಯಕ್ಷವಾದರೆ ಗಾಡಿ ತಿರುಗಿಸಿ ವಾಪಸ್ ಬರಲಾರದೆ ತಪ್ಪಿಸಿಕೊಳ್ಳಲಾರದೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳೇ ಹೆಚ್ಚು.
ಕಳೆದ ಒಂದು ವರ್ಷದಲ್ಲಿ ನಮ್ಮ ರಾಜ್ಯದಲ್ಲಿ ಸುಮಾರು 9 ಜನರನ್ನು ಕಾಡಾನೆ ಬಲಿ ತೆಗೆದುಕೊಂಡಿದೆ. ಕೊಡಗು, ಹಾಸನ, ಕೋಲಾರ, ದಕ್ಷಿಣ ಕನ್ನಡ, ರಾಮನಗರ, ಚಾಮರಾಜನಗರ ಈ ಪ್ರದೇಶಗಳಲ್ಲಿ ಈ ದಾಳಿ ನಡೆದಿವೆ. ಭಾರತದಲ್ಲಿ ಅತ್ಯಧಿಕ ಆನೆಗಳಿರುವುದು ನಮ್ಮ ರಾಜ್ಯದಲ್ಲೇ. ಇಲಾಖೆಯ ಪ್ರಕಾರ 6,395 ಆನೆಗಳು ಕರ್ನಾಟಕದ ಕಾಡುಗಳಲ್ಲಿ ಹಂಚಿಕೆಯಾಗಿವೆ. ಈ ಮೇಲೆ ವಿವರಿಸಿದ ರಾಜ್ಯದ ಜಿಲ್ಲೆಗಳು ಆನೆಗಳು ಓಡಾಡಲು ಅನುಕೂಲಕರವಾದ ಹೆಚ್ಚು ಪ್ರಪಾತಗಳಿಲ್ಲದ ಸಮತಟ್ಟು ಪ್ರದೇಶಗಳಾಗಿರುವುದರಿಂದ ಅದಕ್ಕಿಂತಲೂ ಹೆಚ್ಚು ಕಾಡಿನ ಪರಿಧಿಯಲ್ಲಿ ಯಥೇಚ್ಛವಾಗಿ ಕೃಷಿ ಒಳಸುರಿಗಳಿರುವುದರಿಂದ ಆನೆಗಳಿಗೆ ಅನುಕೂಲಕರವೇ ಆಗಿದೆ.
ಕಾಫಿ ಬೆಳೆಯುವ ಹಾಸನ, ಸಕಲೇಶಪುರ, ಕೊಡಗು ಈ ಭಾಗದಲ್ಲಿ ಆನೆಗಳು ಬೃಹತ್ ಸಂಖ್ಯೆಯಲ್ಲಿ ಹಿಂಡು ಹಿಂಡಾಗಿ ಬೀಡು ಬಿಟ್ಟಿವೆ. ಮುಖ್ಯ ಕಾರಣ ಅಲ್ಲಿಯ ಕೃಷಿ ಕಾಡಿನೊಳಗಡೆಯೇ ಕೇಂದ್ರೀಕೃತಗೊಂಡಿರುವುದರಿಂದ ಆನೆಗಳಿಗೆ ಬೇಕಾದಷ್ಟು ಆಹಾರಗಳು ಸಿಗುತ್ತವೆ. ಅಲ್ಲಿ ಯಾವತ್ತೂ ಕಾಡು ಮತ್ತು ಕೃಷಿ ಬೇರೆ ಬೇರೆ ವಲಯಗಳಲ್ಲ. ರೈತಾಪಿಗಳ ನಡುವೆ ಗಡಿ ಗುರುತಿಗಾಗಿ ಚಿಕ್ಕ ಚಿಕ್ಕ ಬೇಲಿ ಕಂದಕಗಳಿರಬಹುದೇ ಹೊರತು ಆಹಾರ ಹುಡುಕುವ ಆನೆಯ ಪಾಲಿಗೆ ಆ ಪ್ರದೇಶದಲ್ಲಿ ಯಾವುದೇ ಅಡೆತಡೆಗಳ ಗಡಿರೇಖೆಗಳ ಹಂಗಿಲ್ಲ. ಕಾಡೊಳಗಡೆ ಸಿಗುವ ಯಥೇಚ್ಛ ಹಲಸು, ಈಂದು, ಬಾಳೆ, ತೆಂಗು ಇತ್ಯಾದಿಗಳಿಗೆ ಆವು ಸದಾ ಹೊಂಚುತ್ತವೆ.
ಸಕಲೇಶಪುರದಲ್ಲಂತೂ ಕಳೆದ ನಾಲ್ಕೈದು ವರ್ಷಗಳಿಂದ ನೂರಾರು ಸಂಖ್ಯೆಯಲ್ಲಿ ತಂಡೋಪತಂಡವಾಗಿ ಆನೆಗಳು ಕಾಫಿ ತೋಟದಲ್ಲಿ ಬೀಡು ಬಿಟ್ಟಿವೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗಷ್ಟೇ ಅಲ್ಲ, ಅಲ್ಲಿಯ ಕೃಷಿಕರಿಗೂ ಆನೆಗಳ ಹೆಸರು ಗೊತ್ತಿದೆ. ಗುಂಪಿನ ನಾಯಕನನ್ನು ಗುರುತಿಸುವಷ್ಟು ಅವೆಲ್ಲವೂ ಪರಿಚಿತವಾಗಿವೆ. ಪ್ರತಿದಿನ ಅಲ್ಲಿ ತೋಟದ ಮಾಲಕರು ತಮ್ಮ ಎಸ್ಟೇಟ್ ಒಳಗಡೆ ಪ್ರವೇಶಿಸಬೇಕಾದರೆ ಮೊಬೈಲ್ ನೋಡಿ ಖಚಿತ ಪಡಿಸಿಕೊಳ್ಳಬೇಕಾದ ಅಗತ್ಯವಿದೆ. ಬಹುಪಾಲು ಅಪಾಯಕಾರಿ ಆನೆಗಳಿಗೆ ಸಿಮ್ ಅಳವಡಿಸಿದ್ದ ಕಾರಣಕ್ಕೆ ಅಂತಹ ಆನೆಗಳು ಎಲ್ಲಿ ಚಲಿಸುತ್ತವೆ? ಯಾರ ತೋಟದಲ್ಲಿವೆ ಎಂಬುದನ್ನು ಸೆಟಲೈಟ್ ದಾರಿಯಲ್ಲಿ ಖಚಿತಪಡಿಸಿ ಅರಣ್ಯ ಇಲಾಖೆ ಪ್ರತಿದಿನ ತೋಟದ ಮಾಲಕರಿಗೆ ಸಂದೇಶದ ಎಚ್ಚರಿಕೆಯನ್ನು ರವಾನಿಸುತ್ತದೆ. ಕೆಲಸಕ್ಕೆ ಕೂಲಿಕಾರ್ಮಿಕರನ್ನು ಕರೆಸಿಕೊಂಡ ಎಷ್ಟೋ ಮಾಲಕರು ಈ ಆನೆ ಸುದ್ದಿಯನ್ನು ಖಚಿತಪಡಿಸಿಕೊಂಡು ಕೆಲವೊಂದು ದಿನ ಕೆಲಸಗಾರರನ್ನು ವಾಪಾಸ್ ಕಳಿಸಿದ ದೃಷ್ಟಾಂತವೂ ಇದೆ. ಆನೆಯ ಹಿಂಡು ಎಲ್ಲಿ ಬಿಡು ಬಿಟ್ಟಿದೆ, ಯಾವ ಕಡೆಗೆ ಚಲಿಸುತ್ತಿದೆ ಎಂಬುವುದನ್ನು ಕರಾರುವಕ್ಕಾಗಿ ಅಳೆಯುವ, ಗಮನಿಸುವ, ರೈತಾಪಿಗಳಿಗೆ ಎಚ್ಚರಿಕೆ ಕೊಡುವ ಈ ಯಾಂತ್ರಿಕ ವ್ಯವಸ್ಥೆ ಅನುಕೂಲಕರವೇ ಆಗಿ ಅನೇಕ ಅನಿರೀಕ್ಷಿತ ಅವಘಡ, ಸಾವನ್ನು ತಪ್ಪಿಸಿದ್ದೂ ಸುಳ್ಳಲ್ಲ. ಇಷ್ಟಕ್ಕೆ ಅರಣ್ಯ ಇಲಾಖೆ ಕ್ಷೇಮವಾಗಿ ಕೂರುವ ಹಾಗಿಲ್ಲ. ಇದೊಂದು ತಾತ್ಕಾಲಿಕ ಸುರಕ್ಷಿತ ಕ್ರಮವೇ ಹೊರತು, ಆನೆಗಳಿಂದ ಆಗುವ ಕೃಷಿ ನಷ್ಟವನ್ನು ಉಳಿಸುವ ದಾರಿ ಅಲ್ಲವೇ ಅಲ್ಲ ಎಂಬ ಪ್ರಜ್ಞೆ ಇಲಾಖೆಗೆ, ಸರಕಾರಕ್ಕೆ ಇರಲೇಬೇಕು.
ಬೆಳಗೆದ್ದು ಮುಖ ತೊಳೆಯುವ ಮುಂಚೆ ಮೊಬೈಲ್ ನೋಡಿ ಇವತ್ತು ಆನೆ ತನ್ನ ತೋಟದಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ತೋಟಕ್ಕಿಳಿಯುವ ರೈತರು ಇಡೀ ದಿನ ನಿಶ್ಚಿಂತೆಯಿಂದ ಇರುವ ಹಾಗಿಲ್ಲ. ಆನೆಗಳು ಎಲ್ಲೆಂದರಲ್ಲಿ ಚಲಿಸುತ್ತವೆ, ಆಹಾರಕ್ಕಾಗಿ ರಣರಂಪ ಮಾಡುತ್ತವೆ. ಕೇವಲ ಆನೆಯಷ್ಟೇ ಅಲ್ಲ, ಕೃಷಿ- ಗ್ರಾಮವಾಸಿಗಳಿಗೆ ಉಪಟಳ ಕೊಡುವ, ಕಾಡಿನ ಪ್ರಾಣಿಗಳು ಊರಿಗೆ ಬರುವುದಕ್ಕೆ ಪ್ರಮುಖ ಕಾರಣಗಳು ಅವುಗಳ ಆವಾಸಸ್ಥಾನ ನಾಶ. ಕಾಡು ಕಡಿತ, ಗಣಿಗಾರಿಕೆ ಮತ್ತು ನಗರೀಕರಣದಿಂದ ಪ್ರಾಣಿಗಳ ವಾಸಸ್ಥಾನ ದಿನೇ ದಿನೇ ಕಿರಿದಾಗುತ್ತಿದೆ. ಇನ್ನೊಂದು ಅವುಗಳಿಗೆ ಬೇಕಾದ ಆಹಾರ ಕೊರತೆ. ಪರಿಣಾಮ ಅವು ಊರಿನ ತ್ಯಾಜ್ಯ, ಕೃಷಿ ಭೂಮಿ ಅಥವಾ ಹಸಿರು ದಾಸ್ತಾನುಗಳಿಗೆ ಆಕರ್ಷಿತವಾಗುತ್ತವೆ. ನೀರಿನ ಬರಗಾಲ ಅಥವಾ ನೀರಿನ ಮೂಲಗಳ ಒಣಗುವಿಕೆಯಿಂದ ಪ್ರಾಣಿಗಳು ಜಲಮೂಲ ಹುಡುಕಿಕೊಂಡು ಊರಿನ ಕೆರೆ, ಕಾಲುವೆಗಳಿಗೆ ಬರುತ್ತವೆ.
ಮಾನವ-ಪ್ರಾಣಿ ಸಂಘರ್ಷವೂ ಇಂಥ ಊರು ಒತ್ತುವರಿಗೆ ಒಂದು ಕಾರಣವೇ. ಕಾಡಿನ ಗಡಿಯಲ್ಲಿ ಮಾನವ ಒತ್ತಡ, ಒತ್ತುವರಿ, ಅತಿಕ್ರಮಣದಿಂದ ಪ್ರಾಣಿಗಳು ತಮ್ಮ ವಲಯದಿಂದ ಚದುರಿ ಊರಿಗೆ ಬರುತ್ತವೆ. ಊರಿನಲ್ಲಿ ಸುಲಭವಾಗಿ ದೊರೆಯುವ ಆಹಾರ ಮತ್ತು ಸುರಕ್ಷಿತ ಸ್ಥಳಗಳು ಕೆಲವು ಪ್ರಾಣಿಗಳನ್ನು ಆಕರ್ಷಿಸುತ್ತವೆ. ಕೆಲವು ಪ್ರಾಣಿಗಳು ಋತುಮಾನದ ಆಹಾರ ಅಥವಾ ಸಂತಾನೋತ್ಪತ್ತಿಗಾಗಿ ಊರಿನತ್ತ ಸ್ಥಳಾಂತರಗೊಳ್ಳಲೂ ಬಹುದು. ಕಾಡಿನ ಅಂತರ್ಗತ ಒತ್ತಡ ಅಂದರೆ ಕಾಡಿನಲ್ಲಿ ಅಸ್ತಿತ್ವ ಪೈಪೋಟಿ, ರೋಗಗಳು ಅಥವಾ ಇತರ ಪ್ರಾಣಿಗಳ ದಾಳಿಯಿಂದ ಕೆಲವು ಪ್ರಾಣಿಗಳು ಊರಿಗೆ ತಪ್ಪಿಸಿಕೊಂಡು ಬರುವ ಸಾಧ್ಯತೆಯೂ ಇದೆ. ಇಂಥ ಸಮಸ್ಯೆಗಳನ್ನು ತಡೆಗಟ್ಟಲು ಕಾಡು ಸಂರಕ್ಷಣೆ, ಆಹಾರ-ನೀರಿನ ವ್ಯವಸ್ಥೆ ಮತ್ತು ಮಾನವ-ಪ್ರಾಣಿ ಸಂಘರ್ಷ ನಿರ್ವಹಣೆ ಅಗತ್ಯ.
ಕಾಡಾನೆಗಳ ದಾಳಿಯಿಂದ ರೈತರಿಗೆ ಉಂಟಾಗುವ ಸಂಕಷ್ಟವನ್ನು ಕಡಿಮೆ ಮಾಡಲು ಈ ಕೆಳಗಿನ ಪರಿಹಾರಗಳನ್ನು ಅನುಸರಿಸಬಹುದು. ಆಳವಾದ ದಾಟಲಾಗದ ಕಂದಕಗಳು ಮತ್ತು ಬೇಲಿಗಳ ನಿರ್ಮಾಣ. ಜೊತೆಗೆ ವಿದ್ಯುತ್ ಬೇಲಿಗಳು ಅಥವಾ ಕಬ್ಬಿಣದ ತಂತಿ ಬೇಲಿಗಳನ್ನು ಗ್ರಾಮದ ಸುತ್ತ ನಿರ್ಮಿಸುವುದು ಆನೆಗಳ ಒಳನುಗ್ಗುವಿಕೆಯನ್ನು ತಡೆಯಬಹುದು. ಡ್ರೋನ್‌ಗಳು, ಸಿಸಿಟಿವಿ ಕ್ಯಾಮರಾಗಳು ಮತ್ತು ಚಲನೆ-ಗ್ರಹಿಕೆ ಸಂವೇದಕಗಳನ್ನು ಬಳಸಿ ಆನೆಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡಬಹುದು. ಈ ಮೇಲಿನ ತಾಂತ್ರಿಕ ದಾರಿಯಲ್ಲಿ ರೈತರ ಮೊಬೈಲ್‌ಗಳಿಗೆ ಮುಂಚಿತವಾಗಿ ಎಚ್ಚರಿಕೆ ನೀಡಬಹುದು. ಊರ ಮಧ್ಯೆ ಎಚ್ಚರಿಕೆಯ ಸೈರನ್ ಮೊಳಗುವ ಹಾಗೆ ಮಾಡಬಹುದು.
ಊರ ರೈತರು ಬೆಳೆಸಿದ ಕೃಷಿ ಬೆಳೆಗಳನ್ನು ಮುಟ್ಟದ ಹಾಗೆ ಕಾಡಿನೊಳಗಡೆಯೇ ಆನೆಗಳನ್ನು ಆಕರ್ಷಿಸುವ ಬೆಳೆಗಳನ್ನು ನೆಡುವುದು. ಪರ್ಯಾಯವಾಗಿ ರೈತರು ಆನೆ ಆಕರ್ಷಿಸದ ಬೆಳೆಗಳಾದ ಮೆಣಸಿನಕಾಯಿ, ಶುಂಠಿ ಅಥವಾ ಔಷಧೀಯ ಸಸ್ಯಗಳನ್ನು ಬೆಳೆಯುವುದು. ಇದರಿಂದ ಆನೆಗಳು ತೋಟಗಳಿಗೆ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಆನೆಗಳನ್ನು ಓಡಿಸಲು ಜೋರಾದ ಶಬ್ದ (ಪಟಾಕಿಗಳು, ಡ್ರಮ್‌ಗಳು) ಅಥವಾ ತೀವ್ರ ಬೆಳಕಿನ ವ್ಯವಸ್ಥೆಗಳನ್ನು ಬಳಸಬಹುದು. ದಶಕದ ಹಿಂದೆ ಗುತ್ತಿಗಾರು ಸಮೀಪ ರೈತರೊಬ್ಬರು ತೋಟದ ಒಳಗಡೆ ಪ್ರತೀ ದಿವಸ ದೀಪ ಉರಿಸಿ ಆನೆಗಳನ್ನು ನಿಯಂತ್ರಿಸಿದ ಕತೆ ಗೊತ್ತೇ ಇದೆ. ಇನ್ನೊಂದು ಆನೆಗಳಿಗೆ ಸುರಕ್ಷಿತವಾಗಿ ಸಂಚರಿಸಲು ಕಾಡಿನ ಕಾರಿಡಾರ್‌ಗಳನ್ನು ಒಡ್ಡಿಕೊಡುವುದು ಮತ್ತು ಅರಣ್ಯವನ್ನು ಸಂರಕ್ಷಿಸುವುದು. ಇದರಿಂದ ಆನೆಗಳು ಗ್ರಾಮಗಳಿಗೆ ಬರದೆ ಕಾಡಿನಲ್ಲೇ ಆಹಾರ ಮತ್ತು ನೀರನ್ನು ಪಡೆಯಬಹುದು.
ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆನೆ ಓಡಿಸುವ ತಂಡಗಳನ್ನು ಅಲ್ಲಲ್ಲಿ ರಚಿಸುವುದು ಮತ್ತೊಂದು ಸುಗಮ ಉಪಾಯ. ತರಬೇತಿ ಪಡೆದ ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರು ಆನೆಗಳನ್ನು ಊರಿನಿಂದ ದೂರದ ಸುರಕ್ಷಿತ ಕಾಡಿಗೆ ಮರಳಿಸಬಹುದು. ಸರಕಾರದಿಂದ ತ್ವರಿತವಾಗಿ ಬೆಳೆ ಹಾನಿಗೆ ಪರಿಹಾರ ಮತ್ತು ವಿಮೆಯನ್ನು ಒದಗಿಸುವುದು-ಮತ್ತೊಂದು ದಾರಿ. ಇದರಿಂದ ರೈತರ ಆರ್ಥಿಕ ನಷ್ಟ ಕಡಿಮೆಯಾಗುತ್ತದೆ.