ಮುಂಬೈನಲ್ಲಿ ಮುಂದುವರಿದ ಭಾರೀ ಮಳೆ, ರಸ್ತೆ, ರೈಲು ಸಂಚಾರಕ್ಕೆ ಅಡ್ಡಿ
ಭಾರೀ ಮಳೆಯಿಂದಾಗಿ ರೈಲು ನಿಲ್ದಾಣದಲ್ಲಿ ನೀರು ನಿಂತಿರುವುದು, ಫೋಟೋ: ANI
ಮುಂಬೈ: ಮಹಾನಗರ ಹಾಗೂ ಅದರ ಉಪನಗರಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ಮುಂಬೈನ ಕೆಲವು ಭಾಗಗಳಲ್ಲಿ ರಸ್ತೆ ಸಂಚಾರದಲ್ಲಿ ಸಮಸ್ಯೆಯಾಗಿದೆ. ಸ್ಥಳೀಯ ರೈಲು ಸೇವೆಗಳು ಸ್ವಲ್ಪ ಮಟ್ಟಿಗೆ ನಿಧಾನವಾಗಿ ಸಂಚರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 25 ರಂದು ನೈಋತ್ಯ ಮಾನ್ಸೂನ್ ಮುಂಬೈನಲ್ಲಿ ಆರಂಭವಾದಾಗಿನಿಂದ ನಗರದಲ್ಲಿ ಭಾರೀ ಮಳೆಯಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ ಮುಂಬೈ, ಅದರ ಪೂರ್ವ ಉಪನಗರಗಳು ಹಾಗೂ ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 31 ಮಿಮೀ, 45 ಮಿಮೀ ಮತ್ತು 61 ಮಿಮೀ ಸರಾಸರಿ ಮಳೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮುಂಜಾನೆಯಿಂದ ಸಾಧಾರಣದಿಂದ ಭಾರಿ ಮಳೆಯಾಗುತ್ತಿದ್ದು, ಉಪನಗರಗಳಲ್ಲಿ ಮಳೆಯ ತೀವ್ರತೆ ಹೆಚ್ಚಿದ್ದು, ಕೆಲವೆಡೆ ಜಲಾವೃತವಾಗಿದೆ ಎಂದು ಅವರು ಹೇಳಿದರು.
ಪಶ್ಚಿಮ ರೈಲ್ವೆಯ ಅಂಧೇರಿ ಹಾಗೂ ಜೋಗೇಶ್ವರಿ ನಿಲ್ದಾಣಗಳ ನಡುವೆ ಇರುವ ಅಂಧೇರಿ ಸುರಂಗ ಮಾರ್ಗವು ಜಲಾವೃತಗೊಂಡಿದ್ದರಿಂದಾಗಿ ಸಂಚಾರಕ್ಕೆ ನಿರ್ಬಂಧಿಸಲಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಉಪನಗರಗಳ ಕೆಲವು ಭಾಗಗಳಲ್ಲಿಯೂ ಸಂಚಾರ ನಿಧಾನವಾಗಿ ನಡೆಯುತ್ತಿದೆ.
ಮಧ್ಯ ರೈಲ್ವೆ ಮತ್ತು ಪಶ್ಚಿಮ ರೈಲ್ವೆಯ ಉಪನಗರ ರೈಲು ಸೇವೆಗಳು ಸಾಮಾನ್ಯವಾಗಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.