×
Ad

ಸಂಗೀತ ಸಂಯೋಜಕ ಪ್ರೀತಮ್ ಕಚೇರಿಯಲ್ಲಿ 40 ಲಕ್ಷ ರೂ. ಕಳವು: ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲು

Update: 2025-02-09 16:51 IST

ಮುಂಬೈ: ಸಂಗೀತ ಸಂಯೋಜಕ ಪ್ರೀತಮ್ ಚಕ್ರವರ್ತಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು 40 ಲಕ್ಷ ರೂ. ಕಳವು ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ, ಅವರ ವ್ಯವಸ್ಥಾಪಕರು ಮಲಾಡ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪೊಲೀಸರ ಪ್ರಕಾರ, ಶಂಕಿತ ಆರೋಪಿಯನ್ನು ಆಶಿಶ್ ಸಾಯಲ್ (32) ಎಂದು ಗುರುತಿಸಲಾಗಿದ್ದು, ಆತನ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎನ್ನಲಾಗಿದೆ.

ಈ ಘಟನೆಯು ಫೆಬ್ರವರಿ 4ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಸಂಭವಿಸಿದೆ. ನಿರ್ಮಾಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಗೋರೆಗಾಂವ್ ನಲ್ಲಿರುವ ಸಂಗೀತ ಸಂಯೋಜಕ ಪ್ರೀತಮ್ ಅವರ ಸಂಗೀತ ಸ್ಟುಡಿಯೊ ಯೂನಿಮಸ್ ರೆಕಾರ್ಡ್ ಪ್ರೈವೇಟ್ ಲಿಮಿಟೆಡ್ ಗೆ ಆಗಮಿಸಿ, 40 ಲಕ್ಷ ರೂ. ನಗದು ಹೊಂದಿರುವ ಬ್ಯಾಗ್ ಅನ್ನು ಅವರ ವ್ಯವಸ್ಥಾಪಕ ವಿನೀತ್ ಚೆಡ್ಡಾಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಚೆಡ್ಡಾರೊಂದಿಗೆ ಸಾಯಲ್, ಅಹ್ಮದ್ ಖಾನ್ ಹಾಗೂ ಕಮಲ್ ದಿಶಾ ಕೂಡಾ ಉಪಸ್ಥಿತರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

“ನಗದು ಸ್ವೀಕರಿಸಿದ ವ್ಯವಸ್ಥಾಪಕರು, ಅದನ್ನು ಕಚೇರಿಯಲ್ಲಿದ್ದ ಟ್ರಾಲಿ ಬ್ಯಾಗ್ ನಲ್ಲಿಟ್ಟಿದ್ದಾರೆ. ಇದರ ಬೆನ್ನಿಗೇ, ಕೆಲವು ದಾಖಲೆಗಳಿಗೆ ಪ್ರೀತಮ್ ಅವರ ಸಹಿ ಪಡೆಯಲು ಅದೇ ಕಟ್ಟಡದಲ್ಲಿರುವ ಪ್ರೀತಮ್ ಅವರ ನಿವಾಸಕ್ಕೆ ತೆರಳಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ, ಕಚೇರಿಗೆ ಮರಳಿ ಬಂದಾಗ, ತಾನು ನಗದು ಇಟ್ಟಿದ್ದ ಟ್ರಾಲಿ ಬ್ಯಾಗ್ ಕಾಣೆಯಾಗಿರುವುದನ್ನು ಚೆಡ್ಡಾ ಗಮನಿಸಿದ್ದಾರೆ. ಈ ಕುರಿತು ಅವರು ಮೊದಲಿಗೆ ಇತರ ಸಿಬ್ಬಂದಿಗಳನ್ನು ವಿಚಾರಿಸಿದಾಗ, ಆ ಬ್ಯಾಗನ್ನು ಪ್ರೀತಮ್ ಅವರ ನಿವಾಸಕ್ಕೆ ಕೊಂಡೊಯ್ಯುವ ಸೋಗಿನಲ್ಲಿ ಸಾಯಲ್ ಅದನ್ನು ಕಚೇರಿಯಿಂದ ಹೊತ್ತೊಯ್ದರು ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಆಗ ವ್ಯವಸ್ಥಾಪಕ ಚೆಡ್ಡಾ ಸಾಯಲ್ ರನ್ನು ಸಂಪರ್ಕಿಸಲು ಯತ್ನಿಸಿದರೂ, ಅವರು ಉತ್ತರಿಸಿಲ್ಲ. ನಂತರ, ಅವರ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿದೆ. ಇದರಿಂದ ಏನೋ ಎಡವಟ್ಟಾಗಿದೆ ಎಂದು ಶಂಕಿಸಿರುವ ಚೆಡ್ಡಾ, ಈ ವಿಷಯವನ್ನು ಪ್ರೀತಮ್ ಅವರಿಗೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

“ಪ್ರೀತಮ್ ಅವರ ಸಲಹೆ ಮೇರೆಗೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ ಚೆಡ್ಡಾ, ಈ ಸಂಬಂಧ ದೂರು ದಾಖಲಿಸಿದ್ದಾರೆ. ಕಳವು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಶಂಕಿತ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ. ನಾವು ಆತನ ಸಂಬಂಧಿಕರನ್ನು ಸಂಪರ್ಕಿಸಲಿದ್ದು, ಆತನ ಮೊಬೈಲ್ ಫೋನ್ ಕರೆ ದತ್ತಾಂಶದ ದಾಖಲೆಯ ಮೂಲಕ ಸುಳಿವು ಪತ್ತೆ ಹಚ್ಚಲು ಕೆಲಸ ಮಾಡುತ್ತಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News