×
Ad

ಐಸಿಸಿ ವಿಶ್ವಕಪ್ ಸ್ಥಳಗಳನ್ನು ಪರಿಶೀಲಿಸಲು ಭಾರತಕ್ಕೆ ಭದ್ರತಾ ನಿಯೋಗ ಕಳುಹಿಸಲು ಪಾಕಿಸ್ತಾನ ಸಿದ್ಧತೆ: ವರದಿ

Update: 2023-07-01 11:48 IST

ಅಹಮದಾಬಾದ್ ಸ್ಟೇಡಿಯಮ್, Photo: twitter

ಕರಾಚಿ: ಈ ವರ್ಷದ ಐಸಿಸಿ ಏಕದಿನ ವಿಶ್ವಕಪ್ ಗಾಗಿ ನೆರೆಯ ದೇಶಕ್ಕೆ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಯಾಣಕ್ಕೆ ಅನುಮತಿ ನೀಡುವ ಮೊದಲು ವಿಶ್ವಕಪ್ ಪಂದ್ಯಗಳು ನಡೆಯುವ ಸ್ಥಳಗಳನ್ನು ಪರಿಶೀಲಿಸಲು ಪಾಕಿಸ್ತಾನವು ಭದ್ರತಾ ನಿಯೋಗವನ್ನು ಭಾರತಕ್ಕೆ ಕಳುಹಿಸಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

ಈದ್ ರಜೆಯ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದ ಬಳಿಕ ಭದ್ರತಾ ನಿಯೋಗವನ್ನು ಭಾರತಕ್ಕೆ ಯಾವಾಗ ಕಳುಹಿಸಬೇಕು ಎಂದು ವಿದೇಶಾಂಗ ಮತ್ತು ಆಂತರಿಕ ಸಚಿವಾಲಯ ಸೇರಿದಂತೆ ಸರಕಾರವು ನಿರ್ಧರಿಸುತ್ತದೆ ಎಂದು ಅಂತರ-ಪ್ರಾಂತೀಯ ಸಮನ್ವಯ (ಕ್ರೀಡಾ) ಸಚಿವಾಲಯದ ಅಧಿಕೃತ ಮೂಲ ತಿಳಿಸಿದೆ.

"ಪಾಕಿಸ್ತಾನ ಆಡುವ ಸ್ಥಳಗಳು ಹಾಗೂ ವಿಶ್ವಕಪ್ನಲ್ಲಿ ಪಾಕ್ ಆಟಗಾರರಿಗೆ ಮಾಡಿರುವ ಭದ್ರತೆ ಮತ್ತು ಇತರ ವ್ಯವಸ್ಥೆಗಳನ್ನು ಪರಿಶೀಲಿಸಲು ಭದ್ರತಾ ನಿಯೋಗವು ಪಿಸಿಬಿಯ ಪ್ರತಿನಿಧಿಯೊಂದಿಗೆ ಹೋಗಲಿದೆ" ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 15 ರಂದು ಭಾರತ-ಪಾಕಿಸ್ತಾನ ನಡುವೆ ಅಹಮದಾಬಾದ್ ನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಇಂಡೋ-ಪಾಕ್ ಪಂದ್ಯದ ಸ್ಥಳವಾದ ಅಹಮದಾಬಾದ್ ಅಲ್ಲದೆ ಚೆನ್ನೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾಕ್ಕೆ ಪಿಸಿಬಿ ನಿಯೋಗ ಭೇಟಿ ನೀಡಲಿದೆ ಎಂದು ಅಧಿಕಾರಿಗಳು ಹೇಳಿದರು.

"ಭಾರತಕ್ಕೆ ಯಾವುದೇ ಪ್ರವಾಸದ ಮೊದಲು ಸರಕಾರದಿಂದ ಅನುಮತಿ ಪಡೆಯುವುದು, ಸಾಮಾನ್ಯವಾಗಿ ಭಾರತಕ್ಕೆ ನಿಯೋಗವನ್ನು ಕಳುಹಿಸುವುದು ಕ್ರಿಕೆಟ್ ಮಂಡಳಿಗೆ ರೂಢಿಯಾಗಿದೆ.ನಿಯೋಗವು ಯಾವುದೇ ಕಳವಳಗಳನ್ನು ಹೊಂದಿದ್ದರೆ ಪಿಸಿಬಿ, ಐಸಿಸಿ ಮತ್ತು ಬಿಸಿಸಿಐಯೊಂದಿಗೆ ವರದಿಯನ್ನು ಹಂಚಿಕೊಳ್ಳುತ್ತದೆ” ಎಂದು ಅಧಿಕಾರಿ ಹೇಳಿದರು.

ಕಳೆದ ಬಾರಿ ಪಾಕಿಸ್ತಾನವು ಟಿ-20 ವಿಶ್ವಕಪ್ ಗಾಗಿ ಭಾರತಕ್ಕೆ ತೆರಳಿದಾಗ ಸರಕಾರವು ಜಂಟಿ ನಿಯೋಗವನ್ನು ಸ್ಥಳಗಳ ತಪಾಸಣೆಗೆ ಕಳುಹಿಸಿತ್ತು ಎಂದು ಪಿಸಿಬಿಯ ಮೂಲವೊಂದು ದೃಢಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News