×
Ad

ಏಕರೂಪ ನಾಗರಿಕ ಸಂಹಿತೆ ಮೊದಲು ಹಿಂದೂಗಳಿಗೆ ಅನ್ವಯಿಸಬೇಕು: ಡಿಎಂಕೆ ಪ್ರತಿಪಾದನೆ

Update: 2023-06-28 10:51 IST

ಹೊಸದಿಲ್ಲಿ: ಏಕರೂಪ ನಾಗರಿಕ ಸಂಹಿತೆ ಜಾರಿ ಅಗತ್ಯವಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷವಾದ ಡಿಎಂಕೆ ಕಟುವಾಗಿ ಪ್ರಶ್ನಿಸಿವೆ.

ಮೊದಲು ಹಿಂದೂಗಳಿಗೆ ಏಕರೂಪದ ಸಂಹಿತೆಯನ್ನು ಅನ್ವಯಿಸಬೇಕು, ನಂತರ ಎಲ್ಲಾ ಜಾತಿಗಳ ಜನರಿಗೆ ದೇವಾಲಯಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಡಿಎಂಕೆ ಪ್ರತಿಪಾದಿಸಿದೆ.

''ಹಿಂದೂ ಧರ್ಮದಲ್ಲಿ ಮೊದಲು ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು. ದೇಶದ ಯಾವುದೇ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಪ್ರತಿಯೊಬ್ಬರಿಗೂ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಸಂವಿಧಾನ ಪ್ರತಿಯೊಂದು ಧರ್ಮಕ್ಕೂ ರಕ್ಷಣೆ ನೀಡಿರುವ ಕಾರಣ ನಮಗೆ ಯುಸಿಸಿ (ಏಕರೂಪ ನಾಗರಿಕ ಸಂಹಿತೆ) ಬೇಡ" ಎಂದು ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಹೇಳಿದ್ದಾರೆ.

"ದೇಶದಲ್ಲಿನ ಬಡತನ, ಬೆಲೆ ಏರಿಕೆ ಮತ್ತು ನಿರುದ್ಯೋಗದ ಬಗ್ಗೆ ಅವರು (ಪಿಎಂ ಮೋದಿ) ಮೊದಲು ಉತ್ತರಿಸಬೇಕು" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

"ಅವರು ಮಣಿಪುರ ವಿಷಯದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಅಲ್ಲಿ ಇಡೀ ರಾಜ್ಯವು ಉರಿಯುತ್ತಿದೆ. ಅವರು ಈ ಎಲ್ಲಾ ಸಮಸ್ಯೆಗಳಿಂದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ" ಎಂದು ವೇಣುಗೋಪಾಲ್ ಹೇಳಿದರು.

ಬಿಜೆಪಿಯ ಚುನಾವಣಾ ಪ್ರಣಾಳಿಕೆಗಳ ಭಾಗವಾಗಿರುವ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದ ಅಗತ್ಯವನ್ನು ಮಂಗಳವಾರ ಭೋಪಾಲ್ ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪ್ರತಿಪಾದಿಸಿದ ಪ್ರಧಾನಿ ಮೋದಿ, "ಒಂದು ಕುಟುಂಬದ ವಿವಿಧ ಸದಸ್ಯರಿಗೆ ವಿಭಿನ್ನ ನಿಯಮಗಳು" ಕೆಲಸ ಮಾಡುವುದಿಲ್ಲ ಹಾಗೂ ದೇಶವು ಎರಡು ಕಾನೂನಿಗಳಿಂದ ನಡೆಯಲು ಸಾಧ್ಯವಿಲ್ಲ'' ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News