×
Ad

ಮಿರ್ಚಿ ಬಜ್ಜಿ ತಿನ್ನಲು ಸೈರನ್ ದುರ್ಬಳಕೆ ಮಾಡಿಕೊಂಡ ಆ್ಯಂಬುಲೆನ್ಸ್ ಚಾಲಕ!

Update: 2023-07-13 15:34 IST

Screengrab: Twitter/ @Anjanikumar_IPS

ಹೈದರಾಬಾದ್: ಸಂಚಾರ ದಟ್ಟಣೆಯಿಂದ ಪಾರಾಗಲು ಆ್ಯಂಬುಲೆನ್ಸ್‌ನ ತುರ್ತು ಸೈರನ್ ಅನ್ನು ಬಳಸಿಕೊಂಡಿರುವ ಖಾಸಗಿ ಆಸ್ಪತ್ರೆಯೊಂದರ ಆ್ಯಂಬುಲೆನ್ಸ್ ಚಾಲಕ, ನಂತರ ರಸ್ತೆ ಬದಿಯಲ್ಲಿ ತಿನಿಸು ತಿನ್ನುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಹೈದರಾಬಾದಿನ ಬಶೀರ್‌ಬಾಗ್‌ನಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ಪೊಲೀಸರ ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು hindustantimes.com ವರದಿ ಮಾಡಿದೆ.

ಈ ಘಟನೆಯ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ತೆಲಂಗಾಣ ಪೊಲೀಸ್ ಮಹಾ ನಿರ್ದೇಶಕ ಅಂಜನಿ ಕುಮಾರ್, "ಸೈರನ್‌ಗಳ ದುರ್ಬಳಕೆ ಕಂಡು ಬಂದಿದ್ದು, ಆ್ಯಂಬುಲೆನ್ಸ್ ಸೇವೆಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು ಎಂದು ತೆಲಂಗಾಣ ಪೊಲೀಸರು ಆಗ್ರಹಿಸುತ್ತಾರೆ. ತ್ವರಿತ ಹಾಗೂ ಸುರಕ್ಷಿತ ದಾರಿ ಪಡೆಯಲು ಮಾತ್ರ ನೈಜ ತುರ್ತು ಸೇವೆಗಳು ಸೈರನ್ ಬಳಸಬೇಕಿದೆ. ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಲಹೆ ನೀಡಲಾಗಿದೆ" ಎಂದು ಎಚ್ಚರಿಸಿದ್ದಾರೆ.

ನಾವು ಒಟ್ಟಾಗಿ ತುರ್ತು ಸಂದರ್ಭಗಳಿಗೆ ಹಾಗೂ ಸಮುದಾಯ ಸುರಕ್ಷತೆಗೆ ತ್ವರಿತವಾಗಿ ಸ್ಪಂದಿಸಬಹುದಾಗಿದೆ ಎಂದೂ ಅವರು ಹೇಳಿದ್ದಾರೆ.

ವಿಡಿಯೊದಲ್ಲಿ ಆ್ಯಂಬುಲೆನ್ಸ್ ಚಾಲಕನು ತಾನೇಕೆ ಸೈರನ್ ಕ್ರಿಯಾಶೀಲಗೊಳಿಸಿದೆ ಹಾಗೂ ತಿನಿಸಿನ ಅಂಗಡಿ ಬಳಿ ನಿಲ್ಲಿಸಿದೆ ಎಂದು ಸಬೂಬು ನೀಡುತ್ತಿರುವುದನ್ನು ಕಾಣಬಹುದಾಗಿದೆ. ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ನಲ್ಲಿ ಯಾವುದೇ ರೋಗಿ ಇಲ್ಲದಿರುವುದು ಕಂಡು ಬಂದಿದೆ.

ಪೊಲೀಸರ ಪ್ರಕಾರ, ಸಂಚಾರಿ ಪೇದೆಯು ಅದನ್ನು ತುರ್ತು ಇರಬಹುದು ಎಂದು ಭಾವಿಸಿದ್ದಾರೆ. ಆದರೆ, ಸಂಚಾರಿ ದೀಪದಿಂದ 100 ಮೀಟರ್ ದೂರದಲ್ಲಿದ್ದ ತಿನಿಸಿನ ಅಂಗಡಿ ಬಳಿ ಆ್ಯಂಬುಲೆನ್ಸ್ ನಿಲುಗಡೆ ಮಾಡಿದಾಗ ಅವರಿಗೆ ಈ ಕುರಿತು ಅನುಮಾನ ಹುಟ್ಟಿದೆ ಎಂದು ಹೇಳಲಾಗಿದೆ.

ವಿಡಿಯೊ ತುಣುಕಿನಲ್ಲಿ ಚಾಲಕನು ಓರ್ವ ಶುಶ್ರೂಷಕಿಗೆ ಆರೋಗ್ಯ ಸಮಸ್ಯೆಯಿತ್ತು ಎಂದು ಹೇಳುತ್ತಿರುವುದನ್ನು ಕೇಳಬಹುದಾಗಿದೆ.

ಅದಕ್ಕೆ ಸಂಚಾರಿ ಪೇದೆಯು, "ನೀನು ಸೈರನ್ ಅನ್ನು ಕ್ರಿಯಾಶೀಲಗೊಳಿಸಿದ್ದುದರಿಂದ ನಾನು ಆ್ಯಂಬುಲೆನ್ಸ್ ಮುಂದೆ ಹೋಗಲು ಅನುಮತಿ ನೀಡಿದೆ. ಆದರೆ, ನೀನು ಆಸ್ಪತ್ರೆಗೆ ಹೋಗದೆ ಮಿರ್ಚಿ ಬಜ್ಜಿ ತಿನ್ನುತ್ತಾ, ಟೀ ಕುಡಿಯುತ್ತಿದ್ದೀಯ. ರೋಗಿ ಎಲ್ಲಿ? ಮಿರ್ಚಿ ಬಜ್ಜಿ ತಿನ್ನಲು ನೀನು ಸೈರನ್ ಅನ್ನು ಕ್ರಿಯಾಶೀಲಗೊಳಿಸಿದೆಯಾ?" ಎಂದು ಚಾಲಕನನ್ನು ಪ್ರಶ್ನಿಸಿದ್ದಾರೆ.

ಮೋಟಾರ್ ವಾಹನಗಳ ಕಾಯ್ದೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಚಾಲಕನಿಗೆ ರೂ. 1000/- ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News