ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ, 12 ದಿನದೊಳಗೆ ತನಿಖೆಯ ವರದಿ ಸಲ್ಲಿಸುವಂತೆ ಸೂಚನೆ : ಜಿ.ಪರಮೇಶ್ವರ್

Update: 2024-04-22 17:57 GMT

ತುಮಕೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೆಟರ್ ಪುತ್ರಿ‌ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಮಾತನಾಡಿದ ಅವರು, "ಸಿಐಡಿ ತಂಡ ಹುಬ್ಬಳ್ಳಿಗೆ ಹೋಗಿ ಸ್ಥಳೀಯ ಪೋಲೀಸರು ಈವರೆಗೂ ನಡೆಸಿರುವ ತನಿಖೆಯ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಕೊಲೆಯ ಹಿಂದೆ ಇನ್ನು ನಾಲ್ವರು ಇದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, 12 ದಿನದೊಳಗೆ ಪ್ರಕರಣದ ತನಿಖೆಯ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಯುವತಿಯ ತಂದೆ-ತಾಯಿಗೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿತನನ್ನು ಬಂಧಿಸಲಾಗಿದೆ. ಬಿಜೆಪಿಯವರು ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದು, ರಾಜಕೀಯಕ್ಕೆ ತಿರುಗಿಸಿದ್ದಾರೆ. ನನ್ನ ಬಗ್ಗೆ, ಮುಖ್ಯಮಂತ್ರಿಯವರ ಬಗ್ಗೆ ಕೀಳಾಗಿ, ಕಟುವಾಗಿ ಮಾತನಾಡಿದ್ದಾರೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಚುನಾವಣೆಯಲ್ಲಿ ಜನ ಬಿಜೆಪಿಯವರನ್ನು ಕೈಬಿಡುತ್ತಾರೆ ಎಂಬ ಭಯದಿಂದ ಹುಬ್ಬಳ್ಳಿ ಪ್ರಕರಣವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News