×
Ad

ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರು; ಸಿಎಂ ಜೊತೆ ಚರ್ಚಿಸಿ ಆದೇಶ : ಜಿ.ಪರಮೇಶ್ವರ್‌

Update: 2025-04-10 16:10 IST

ಜಿ.ಪರಮೇಶ್ವರ್‌

ತುಮಕೂರು : ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿಯವರ ಹೆಸರಿಡುವ ಪ್ರಸ್ತಾವನೆ ಸರ್ಕಾರಕ್ಕೆ ಬಂದಿತ್ತು. ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆಗೆ ಮಾತನಾಡಿ, ಅವರ ಒಪ್ಪಿಗೆ ಪಡೆದು ಶೀಘ್ರದಲ್ಲಿ ಆದೇಶ ಹೊರಡಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಹೇಳಿದರು‌.

ಸಿದ್ಧಗಂಗ ಮಠಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ತುಮಕೂರು ರೈಲ್ವೇ ನಿಲ್ದಾಣ ಸ್ವಾಮೀಜಿ ಅವರ ಹೆಸರಿನಲ್ಲಿ ಶಾಶ್ವತವಾಗಿ ಇರುತ್ತದೆ. ಅದು‌ ನಾವು ಅವರಿಗೆ ಕೊಡುವ ಗೌರವ. ಈ ಬಗ್ಗೆ ಸೋಮಣ್ಣನವರು ಒತ್ತಾಯ ಮಾಡಿದ್ದರು. ಈಗಾಗಲೇ ರೈಲ್ವೆ ಇಲಾಖೆಯಿಂದ ಕೇಂದ್ರದಲ್ಲಿ ಮಂಜೂರು ಮಾಡಿಸಿದ್ದಾರೆ. ಶ್ರೀಗಳ ಹೆಸರಿಡಲು ತಡವಾಗಿಲ್ಲ. ಸರ್ಕಾರದಲ್ಲಿ ಕೆಲವು ಪ್ರಕ್ರಿಯೆಗಳು ಇರುತ್ತವೆ. ರಸ್ತೆ, ವೃತ್ತ, ಕಟ್ಟಡಕ್ಕೆ ಹೆಸರಿಡಬೇಕಾದರೆ ಪ್ರಸ್ತಾವನೆಗಳು ಬಂದಾಗ ಪರಿಶೀಲನೆ ಮಾಡಿ, ಸಾಧಕ ಭಾದಕಗಳನ್ನ ನೋಡಿ ಸರ್ಕಾರ ಅನುಮತಿ ಕೊಡುತ್ತದೆ ಎಂದರು.

ನಮ್ಮ ಕುಟುಂಬಕ್ಕೂ ಮಠಕ್ಕೂ ಅವಿನಾಭವ ಸಂಬಂಧವಿದೆ. ನಮ್ಮ ತಂದೆ ಹಾಗೂ ಹಿರಿಯ ಸ್ವಾಮೀಜಿಯವರ ಜೊತೆಗೆ ಇದ್ದಂತಹ ಸಂಬಂಧ ಯಾವಾಗಲೂ ಇರುತ್ತದೆ. ಈ ಸಂಬಂಧವನ್ನು ನಾವು ಮುನ್ನಡೆಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ʼಭದ್ರ ಮೇಲ್ದಂಡೆʼ ಬೇಗ ಪೂರ್ಣಗೊಳಿಸಲು ಮುಂದಾಗಿದ್ದೇವೆ:

ಭದ್ರ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಬೇಕು ಎಂದು ಕೇಂದ್ರಕ್ಕೆ ಒತ್ತಾಯ ಮಾಡಿದ್ದೆವು. ಎರಡು ವರ್ಷದ ಹಿಂದೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 5300 ಕೋಟಿ ರೂ. ಅನುದಾನ ನೀಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದರು. ನಾವೆಲ್ಲ ಬಹಳ ಸಂತೋಷದಲ್ಲಿ ಇದ್ದೆವು. ಈ ಬಹಳ ದೊಡ್ಡ ಯೋಜನೆ, ಬಹಳ ತಾಲ್ಲೂಕುಗಳಿಗೆ ಅನುಕೂಲವಾಗಲಿದೆ. ಕಾರಣಾಂತರಗಳಿಂದ ಹಣ ಅವರು ಕೊಡಲು ಆಗಿರಲಿಲ್ಲ. ಆದರು ಯೋಜನೆ ನಿಲ್ಲುವಂತಿಲ್ಲ. ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಬೇಕು ಅಂತ ಮುಂದಾಗಿದ್ದೇವೆ. ಕೆಲ ಕಡೆ ಅರಣ್ಯ ಬರುವುದರಿಂದ ತಡವಾಗಿದೆ ಎಂದು ತಿಳಿಸಿದರು.

2026ರ ಜೂನ್‌ಗೆ ತುಮಕೂರಿಗೆ ʼಎತ್ತಿನಹೊಳೆʼ ನೀರು :

ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿದೆ. ಪ್ರತಿವರ್ಷ ಹಣ ಬಿಡುಗಡೆ ಮಾಡುತ್ತಿದ್ದೇವೆ. ಆರ್ಥಿಕ ವ್ಯವಸ್ಥೆಯಲ್ಲಿ ಎಷ್ಟು ಸಾಧ್ಯವಿದೆಯೋ ಅಷ್ಟು ಹಣ ನೀಡುತ್ತಿದ್ದೇವೆ. ಬರುವ ಜೂನ್‌ ವೇಳೆಗೆ ಅರಸಿಕೆರೆಗೆ ನೀರು ತಲುಪಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಎರಡು-ಮೂರು ಕಡೆ ಅರಣ್ಯ ಭೂಮಿಯಿಂದ ಸಮಸ್ಯೆಯಾಗಿದೆ. ಅದು ಬಗೆಹರಿದರೆ 2026ರ ಜೂನ್‌ಗೆ ತುಮಕೂರಿಗೆ ಎತ್ತಿನಹೊಳೆ ನೀರು ಬರುತ್ತದೆ. ಮುಂದೆ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಹೋಗುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News