ನಾನು ದೇಶದಲ್ಲಿ ನಂ.1 ಗೃಹ ಸಚಿವ, ಚಾಟ್ ಜಿಪಿಟಿ ನೋಡೋಕೆ ಹೇಳಿ : ಜಿ.ಪರಮೇಶ್ವರ್
ತುಮಕೂರು : ʼಗೊತ್ತಿಲ್ಲ ಸಚಿವರುʼ ಎಂದು ಟ್ರೋಲ್ ಮಾಡುವವರಿಗೆ ‘ಚಾಟ್ ಜಿಪಿಟಿ ನೋಡೋಕೆ ಹೇಳಿ, ಪರಮೇಶ್ವರ್ ಸ್ಥಾನ ಎಲ್ಲಿದೆ ಎಂದು ಗೊತ್ತಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ʼಗೊತ್ತಿಲ್ಲ ಸಚಿವರುʼ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಹೇಳ್ಕೊಳ್ಳಿ ಬಿಡ್ರಿ. ಈ ದೇಶದಲ್ಲಿ ಪ್ರಥಮ ಸ್ಥಾನದಲ್ಲಿ ಗೃಹ ಸಚಿವರು ಇರುವುದು ಪರಮೇಶ್ವರ್. ಅವರಿಗೆ ಚಾಟ್ ಜಿಪಿಟಿ ನೋಡೋಕೆ ಹೇಳಿ. ನೀವು ಪ್ರಶ್ನೆ ಕೇಳ್ತಿರಾ ಎಲ್ಲದಲ್ಲೂ ನಾವು ಉತ್ತರ ಕೊಡುವುದಕ್ಕೆ ಆಗುತ್ತಾ? ಸ್ವಾಭಾವಿಕವಾಗಿ ಗೊತ್ತಿಲ್ಲ ಎಂದು ಹೇಳುತ್ತೇನೆ. ಗೃಹ ಸಚಿವನಾಗಿ ನಾನು ಕೊಡುವಂತಹ ಹೇಳಿಕೆ ಬಹಳ ಜವಾಬ್ದಾರಿಯುತವಾಗಿರಬೇಕು. ಗೊತ್ತಿಲ್ಲದಿರುವುದನ್ನೆಲ್ಲ ಹೇಳುವುದಕ್ಕೆ ಆಗುವುದಿಲ್ಲ. ಹಾಗಾಗಿ ಗೊತ್ತಿಲ್ಲ ಎಂದು ಹೇಳಿರುತ್ತೇನೆ’ ಎಂದರು.
ಷಡ್ಯಂತ್ರ ರೂಪಿಸಿದ್ದಾರೆ ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ಬಗ್ಗೆ ಕೇಳಿದಾಗ, ʼಅವರ ಹೇಳಿಕೆಗೆ ನಾನು ಉತ್ತರ ನೀಡಲು ಆಗುವುದಿಲ್ಲ. ಕೆ.ಎನ್.ರಾಜಣ್ಣ ಜವಾಬ್ದಾರಿಯುತ ಸಚಿವರಾಗಿದ್ದವರು. ರಾಜಣ್ಣ ಹೇಳಿಕೆ ಬಗ್ಗೆ ನೀವು ಅವರನ್ನೇ ಕೇಳಬೇಕು. ಷಡ್ಯಂತ್ರ ರೂಪಿಸುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲʼ ಎಂದು ಹೇಳಿದರು.
ಧರ್ಮಸ್ಥಳ ಚಲೋ ಬಗ್ಗೆ ಮಾತನಾಡಿ, ʼಬಿಜೆಪಿಯವರು ಶ್ರೀ ಮಂಜುನಾಥನ ಆಶೀರ್ವಾದಕ್ಕೆ ಹೋಗುತ್ತಿದ್ದಾರೆ. ಮಂಜುನಾಥನ ಆಶೀರ್ವಾದ ಪಡೆದುಕೊಂಡು ಬರಲಿ. ನಾವು ಧರ್ಮಸ್ಥಳಕ್ಕೆ ಅನೇಕ ಸಂದರ್ಭದಲ್ಲಿ ಹೋಗಿದ್ದೇನೆ. ಮುಂದೆಯೂ ಕೂಡ ಹೋಗುತ್ತೇನೆ. ಬಿಜೆಪಿಯವರನ್ನು ಕೇಳಿಕೊಂಡು ದೇವಸ್ಥಾನಕ್ಕೆ ಹೋಗ್ತಾರಾ?ʼ ಎಂದು ಪ್ರಶ್ನಿಸಿದರು.