×
Ad

ರೈತರಿಗೆ ಕಣ್ಣೀರು ಹಾಕಿಸಿದ ಸರಕಾರಕ್ಕೆ ಒಳ್ಳೆಯದಾಗಲ್ಲ: ಬಿ.ವೈ.ವಿಜಯೇಂದ್ರ

Update: 2025-07-29 19:48 IST

ತುಮಕೂರು: ಕೇಂದ್ರ ಸರಕಾರ ರಾಜ್ಯಕ್ಕೆ ನೀಡಿರುವ ರಸಗೊಬ್ಬರ ರೈತರಿಗೆ ಹಂಚಿಕೆ ಮಾಡದೆ ದಳ್ಳಾಳಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಗೊಬ್ಬರಕ್ಕಾಗಿ ದಿನಬೆಳಗ್ಗೆ ಸಾಲುಗಟ್ಟಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣ ಮಾಡಿರುವ ರಾಜ್ಯ ಕಾಂಗ್ರೆಸ್ ಸರಕಾರ ರೈತರನ್ನು ಬೀದಿಪಾಲು ಮಾಡಿದೆ. ರೈತರ ಕಣ್ಣಲ್ಲಿ ನೀರು ತರಿಸುವ ಯಾವುದೇ ಸರಕಾರಕ್ಕೆ ಒಳ್ಳೆಯದಾಗುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸಗೊಬ್ಬರದ ಕೊರತೆಯಾಗುವಂತೆ ಮಾಡಿದ ಸರಕಾರದ ಕ್ರಮದ ವಿರುದ್ದ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಈ ಬಾರಿ ಮುಂಗಾರು ಉತ್ತಮವಾಗಿದೆ ಎಂದು ಹವಾಮಾನ ಇಲಾಖೆ ಮೂರು ತಿಂಗಳ ಮೊದಲೇ ಮುನ್ಸೂಚನೆ ನೀಡಿದ್ದು, ರೈತರಿಗೆಗೊಬ್ಬರದ ಬೇಡಿಕೆ ಹೆಚ್ಚಾಗುತ್ತದೆ ಎಂದು ಪೂರಕ ಪೂರ್ವ ಸಿದ್ಧತೆ ಮಾಡಿಕೊಂಡು ಗೊಬ್ಬರ ದಾಸ್ತಾನು ಮಾಡದೆ ರಾಜ್ಯ ಸರಕಾರ ರೈತರಿಗೆ ಅನ್ಯಾಯ ಮಾಡಿ ಅವರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿಗೆ ತಂದಿದೆ ಎಂದರು.

ರಾಜ್ಯಕ್ಕೆ ಯೂರಿಯಾ ಗೊಬ್ಬರವು 6.30 ಲಕ್ಷ ಟನ್ ಅವಶ್ಯಕತೆ ಇದ್ದು, ಕೇಂದ್ರ ಸರಕಾರ 8.73 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಅವಶ್ಯಕತೆಗಿಂತ ಹೆಚ್ಚಾಗಿ ಕರ್ನಾಟಕಕ್ಕೆ ನೀಡಿದೆ. ಈ ಗೊಬ್ಬರವನ್ನು ರೈತರಿಗೆ ನೀಡದೆ ದಳ್ಳಾಳಿಗಳಿಂದ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ. ಕಾಂಗ್ರೆಸ್ ಸರಕಾರ ಇರುವ ಕಡೆ ದಳ್ಳಾಳಿಗಳು, ಕಾಳಸಂತೆಕೋರರು ತುಂಬಿರುತ್ತಾರೆ. ಆದರೆ ರೈತರು ದುಪ್ಪಟ್ಟು ಹಣಕೊಟ್ಟು ಗೊಬ್ಬರ ಕೊಳ್ಳುವಂತಾಗಿದೆ ಎಂದು ಹೇಳಿದರು.

ರಾಜ್ಯದ ಕೃಷಿ ಮಂತ್ರಿಯ ಅವಿವೇಕತನದಿಂದ ಇಂದು ಗೊಬ್ಬರ ಸಮಸ್ಯೆ ಉಂಟಾಗಿದೆ. ಮಂಡ್ಯ, ಬೆಂಗಳೂರು ಬಿಟ್ಟು ಕೃಷಿ ಮಂತ್ರಿ ಜಿಲ್ಲೆಗಳ ಪ್ರವಾಸ ಮಾಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿಲ್ಲ. ಮುಖ್ಯಮಂತ್ರಿ ಕೂಡಾ ಜಿಲ್ಲಾಧಿಕಾರಿಗಳ ಸಭೆ ನಡೆಸಿ ರೈತರ ಸ್ಥಿತಿಗತಿ ಪರಿಶೀಲಿಸಿಲ್ಲ ಎಂದು ವಿಜಯೇಂದ್ರ ಆರೋಪಿಸಿದರು.

ಶಾಸಕ ಬಿ.ಸುರೇಶ್‍ಗೌಡರು ಮಾತನಾಡಿ, ಕೇಂದ್ರ ಸರಕಾರ ಕೊಟ್ಟ ಗೊಬ್ಬರವನ್ನು ಅನ್ನದಾತರಿಗೆ ನೀಡದ ಕಾಂಗ್ರೆಸ್ ಸರಕಾರ ರೈತರಿಗೆ ಅನ್ಯಾಯ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ. ಕೆಲಸ ಮಾಡಲು ಹಣವಿಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರ, ಪ್ರಧಾನ ಮಂತ್ರಿಗಳನ್ನು ಟೀಕಿಸುವ ‘ಬ್ಲೇಮ್‍ಗೇಮ್’ನಲ್ಲಿ ನಿರತರಾಗಿದ್ದಾರೆ. ಕೃಷಿ ಸಚಿವರು ಜಿಲ್ಲೆಗಳ ಪ್ರವಾಸ ಮಾಡಿರೈತರ ಸ್ಥಿತಿಗತಿ ಮಾಹಿತಿ ಪಡೆಯುವ ಪ್ರಯತ್ನ ಮಾಡದೆ, ಮಂಡ್ಯದಲ್ಲಿದ್ದುಕೊಂಡು ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಟೀಕಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ,ಕೇಂದ್ರದಿಂದ ಕೊಟ್ಟಗೊಬ್ಬವನ್ನು ರೈತರಿಗೆ ಕೊಡದೆ ಪ್ರತಿಯೊಂದು ವಿಚಾರದಲ್ಲೂ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಮಾನ್ಸೂನ್ ಮುನ್ಸೂಚನೆಯಂತೆ ಅತಿ ಹೆಚ್ಚು ಗೊಬ್ಬರವನ್ನು ಕೇಂದ್ರ ಸರಕಾರ ರಾಜ್ಯಕ್ಕೆ ವಿತರಿಸಿದ್ದರೂ ಕೂಡಾ ರೈತರಿಗೆ ಸಮರ್ಪಕವಾಗಿ ವಿತರಣೆ ಮಾಡಿಲ್ಲ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಮಾಜಿ ಶಾಸಕರಾದ ಮಸಾಲೆ ಜಯರಾಂ, ಎಂ.ಡಿ.ಲಕ್ಷ್ಮೀನಾರಾಯಣ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾ ಬಿಜೆಪಿ ಹಿರಿಯಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಪ್ರಧಾನ ಕಾರ್ಯದರ್ಶಿ ಗಂಗರಾಜು, ಮಾಜಿಜಿಲ್ಲಾಧ್ಯಕ್ಷ ಹನುಮಂತೇಗೌಡ, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಮುಖಂಡರಾದ ಎಸ್.ಪಿ.ಚಿದಾನಂದ್, ಡಿ.ಕೃಷ್ಣಕುಮಾರ್, ಎಸ್.ಡಿ.ದಿಲೀಪ್‍ಕುಮಾರ್, ಬಿ.ಹೆಚ್.ಅನಿಲ್‍ಕುಮಾರ್, ಎಲ್.ಸಿ.ನಾಗರಾಜು, ಬಿ.ಕೆ.ಮಂಜುನಾಥ್, ಸಿ.ಭಾರತಿ, ಚಂದ್ರಶೇಖರಬಾಬು, ಹೆಚ್.ಟಿ.ಭೈರಪ್ಪ, ಭೈರಣ್ಣ, ನಂದೀಶ್, ವಿವಿಧಜಿಲ್ಲಾ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News