×
Ad

ಕುಣಿಗಲ್ | ಸ್ನೇಹಿತರ ಜೊತೆ ಸೇರಿ ತಂದೆಯ ಕೊಲೆ: ವಿದ್ಯುತ್ ಆಘಾತದಿಂದ ಮೃತಪಟ್ಟಂತೆ ಬಿಂಬಿಸಿದ ದುಷ್ಕರ್ಮಿಗಳು

Update: 2025-05-15 15:22 IST

ನಾಗೇಶ್ | ಸೂರ್ಯ 

ತುಮಕೂರು: ಸ್ನೇಹಿತರ ಜೊತೆ ಸೇರಿ ಮಗನೇ ತಂದೆಯನ್ನು ಕೊಲೆಗೈದು ವಿದ್ಯುತ್ ಶಾಕ್ ದಿಂದ ಮೃತಪಟ್ಟಿದ್ದಾರೆ ಎಂದು ಬಿಂಬಿಸಿದ ಆಘಾತಕಾರಿ ಘಟನೆ ಕುಣಿಗಲ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ಶಾಮೀರ್ ಆಸ್ಪತ್ರೆ ಮುಂಭಾಗದ ಐಸ್ ಕ್ರಿಂ ತಯಾರಿಕಾ ಘಟಕದ ಮಾಲಕ ನಾಗೇಶ್ (55) ಕೊಲೆಯಾದವರು. ಈ ಸಂಬಂಧ ಆರೋಪಿಗಳಾದ ನಾಗೇಶ್ ಅವರ ಪುತ್ರ ಸೂರ್ಯ, ಸ್ನೇಹಿತರಾದ ಸಂಜಯ್, ಕುಣಿಗಲ್ ನಿವಾಸಿ ಧನುಷ್ ಎಂಬವರು ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಾಗೇಶ್ ಅವರ ಮೃತದೇಹ ಕಳೆದ ರವಿವಾರ ಐಸ್ ಕ್ರಿಂ ತಯಾರಿಕಾ ಘಟಕದಲ್ಲಿ ಪತ್ತೆಯಾಗಿತ್ತು. ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಬಗ್ಗೆ ಶಂಕಿಸಿ ಮೃತರ ಮಗಳು ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಈ ಮಧ್ಯೆ ಐಸ್ ಕ್ರಿಂ ತಯಾರಿಕಾ ಘಟಕದ ಸಿಸಿಟಿವಿ ಕ್ಯಾಮರಾವನ್ನು ಪೊಲೀಸರು ಪರಿಶೀಲಿಸಿದಾಗ ಕೊಲೆ ಕೃತ್ಯ ಬಯಲಾಗಿದೆ.

ಕೌಟುಂಬಿಕ ಕಲಹದ ಪುತ್ರನೇ ಸ್ನೇಹಿತರ ಜೊತೆ ಸೇರಿ ತಂದೆಯನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹೆಬ್ಬೂರು ಹೋಬಳಿ ತಿಮ್ಮಸಂದ್ರ ನಿವಾಸಿಯಾಗಿದ್ದ ನಾಗೇಶ್ ಪಟ್ಟಣದಲ್ಲಿ ಐಸ್ಕ್ರಿಂ ಘಟಕ ನಡೆಸುತ್ತಿದ್ದರು. ಕೌಟುಂಬಿಕ ಕಲಹ ಕಾರಣದಿಂದ ಪತ್ನಿಯನ್ನು ತೊರೆದಿದ್ದ ನಾಗೇಶ್ ಪುತ್ರ ಮತ್ತು ಪುತ್ರಿಯೊಂದಿಗೆ ವಾಸವಿದ್ದರು.

ನಾಗೇಶ್ ಪುತ್ರ ಸೂರ್ಯ ತಂದೆಯೊಂದಿಗೆ ಜಗಳವಾಡುತ್ತಿದ್ದು ಕೊಲೆಗೆ ನಿರ್ಧರಿಸಿದ್ದ. ಇದಕ್ಕೆ ತಂಗಿಯನ್ನು ಪ್ರೀತಿಸುತ್ತಿದ್ದ ಸಂಜಯ್ ನೆರವನ್ನು ಪಡೆದಿದ್ದ. ಮಗಳ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ನಾಗೇಶ್ ಬಗ್ಗೆ ಸಂಜಯ್ ಗೂ ಕೋಪವಿತ್ತೆನ್ನಲಾಗಿದೆ. ಹಾಗಾಗಿ ಸಂಜಯ್, ಸೂರ್ಯನ ಜತೆ ಸೇರಿ ಮತ್ತೊಬ್ಬ ಸ್ನೇಹಿತ ಕುಣಿಗಲ್ನ ಧನುಷ್ನೊಂದಿಗೆ ಕೊಲೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಗೇಶ್ ಕೊಲೆಗೆ ಸಂಜಯ್ ತನ್ನ ಸ್ನೇಹಿತರಿಗೆ ಸುಪಾರಿ ನೀಡಿದ್ದ. 15 ದಿನಗಳ ಹಿಂದೆ ನಾಗೇಶ್ ತಾಲೂಕಿನ ಕದರಾಪುರದ್ಲಲಿ ಐಸ್ ಕ್ರಿಂ ಮಾರಾಟ ಮಾಡಿ ಸರಕು ಸಾಗಣೆ ವಾಹನದಲ್ಲಿ ಬರುತ್ತಿದ್ದಾಗ ಸುಪಾರಿ ಪಡೆದಿದ್ದ ಸಂಜಯ್ ಸ್ನೇಹಿತರ ತಂಡ ಕಾರಿನಲ್ಲಿ ಬಂದು ಢಿಕ್ಕಿ ಹೊಡೆದು ಅಪಘಾತವೆಂಬಂತೆ ಬಿಂಬಿಸಿ ಕೊಲೆಗೆ ಯತ್ನಿಸಿದ್ದರು. ಆದರೆ ಇದು ವಿಫಲವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎರಡನೇ ಪ್ರಯತ್ನದಲ್ಲಿ ಶನಿವಾರ ರಾತ್ರಿ ಸೂರ್ಯ ಮತ್ತು ಧನುಷ್ ಸೇರಿ ಐಸ್ಕ್ರೀಂ ತಯಾರಿಕ ಘಟಕದಲ್ಲೇ ನಾಗೇಶ್ ಕೊಲೆ ಮಾಡಿ ನಂತರ ಹಾಸಿಗೆಯಲ್ಲಿ ಮಲಗಿಸಿ ವಿದ್ಯುತ್ ತಂತಿ ತಗುಲಿಸಿ, ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟರುವಂತೆ ಬಿಂಬಿಸಿ ಪರಾರಿಯಾಗಿದ್ದರು.

ಸಿ.ಸಿ ಟಿವಿ ಕ್ಯಾಮೆರಾ ದಾಖಲೆಗಳಿಂದ ಕೊಲೆಯಾಗಿರುವುದು ಧೃಢಪಟ್ಟಿದೆ. ಖಚಿತ ಮಾಹಿತಿ ಮೇರೆಗೆ ಪ್ರಮುಖ ಆರೋಪಿಗಳಾದ ಸೂರ್ಯ, ಸಂಜಯ್, ಧನುಷ್ ಮತ್ತು ಸ್ನೇಹಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News