ಲೋಕಸಭೆ ಚುನಾವಣೆ | ಬಿಜೆಪಿ ಮುಖಂಡ ಮಾಧುಸ್ವಾಮಿ ಮನೆಗೆ ಕಾಂಗ್ರೆಸ್​ ಅಭ್ಯರ್ಥಿ ಮುದ್ದಹನುಮೇಗೌಡ ಭೇಟಿ

Update: 2024-04-07 12:08 GMT

ತುಮಕೂರು : ಚುನಾವಣಾ ಪ್ರಚಾರದ ಕಾವು ಜೋರಾಗುತ್ತಿರುವ ನಡುವೆಯೇ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಜೆ.ಸಿ.ಮಾಧುಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲವನ್ನು ಮೂಡಿಸಿದೆ.

ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿರುವ ಜೆ.ಸಿ.ಮಾಧುಸ್ವಾಮಿ ಪಕ್ಷದ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಭೇಟಿ ಮಾಡಲು ನಿರಾಕರಿಸಿದ್ದಾರೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಕ್ಕನಾಯಕನಹಳ್ಳಿಯ ಮನೆಗೆ ಭೇಟಿ ನೀಡಿ, ಜೆ.ಸಿ.ಮಾಧುಸ್ವಾಮಿ ಅವರ ಜೊತೆ ಮಾತುಕತೆ ನಡೆಸಿದ್ದರೂ ಅವರ ಮುನಿಸು ತಣ್ಣಗಾಗಿಲ್ಲ ಎನ್ನಲಾಗಿದೆ.

ಎಪ್ರಿಲ್ 5 ರಂದು ವಿ.ಸೋಮಣ್ಣ ಅವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಪ್ರಚಾರ ನಡೆಸಿದರೂ ಜೆ.ಸಿ.ಮಾಧುಸ್ವಾಮಿ ಅವರನ್ನು ಭೇಟಿ ಮಾಡಿಲ್ಲ. ಹಾಗೆಯೇ ಜೆ.ಸಿ.ಮಾಧುಸ್ವಾಮಿ ಮತ್ತು ಅವರ ಬೆಂಬಲಿಗರೂ ಕೂಡ ಸೋಮಣ್ಣ ಅವರ ಜೊತೆಗೆ ಪ್ರಚಾರಕ್ಕೆ ಹೋಗಿಲ್ಲದಿರುವುದು ಸೋಮಣ್ಣ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಇವೆಲ್ಲದರ ನಡುವೆಯೇ ಎಪ್ರಿಲ್ 7ರಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಅವರು ಚಿಕ್ಕನಾಯಕನಹಳ್ಳಿಗೆ ಪ್ರಚಾರಕ್ಕೆ ತೆರಳಿದಾಗ ಜೆ.ಸಿ.ಮಾಧುಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಮುದ್ದಹನುಮೇಗೌಡರು ಪುಷ್ಪಗುಚ್ಚವನ್ನು ಮಾದುಸ್ವಾಮಿಗೆ ನೀಡಿದ್ದಾರೆ ಆಭಿನಂದನೆ ಸಲ್ಲಿಸಿದ್ದಾರೆ. ಇದು ಈಗ ಜಿಲ್ಲಾ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News