ಸಂತೆಯಲ್ಲಿ ತಪ್ಪಿಸಿಕೊಂಡ ಮಗ ನಾನು, ಯಾರು ಕೈ ಹಿಡಿದು ಕರೆದೊಯ್ಯುತ್ತಾರೋ ಗೊತ್ತಿಲ್ಲ: ಮಾಧುಸ್ವಾಮಿ
ತುಮಕೂರು. ಜು.11: ''ಸಂತೆಯಲ್ಲಿ ತಪ್ಪಿಸಿಕೊಂಡ ಮಗ ನಾನು, ಯಾರು ಕೈ ಹಿಡಿದು ಮನೆಗೆ ಕರೆದುಕೊಂಡು ಹೋಗುತ್ತಾರೋ ಗೊತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಖಚಿತ'' ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಶುಕ್ರವಾರ ಆಗಮಿಸಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ದೃಢಪಡಿಸಿದರು.
ಹೇಮಾವತಿ ಲಿಂಕ್ ಕೆನಾಲ್ ನಿಂದ ಜಿಲ್ಲೆಗೆ ತುಂಬಾ ಅನ್ಯಾಯವಾಗಲಿದೆ. ಲೋಕಸಭಾ ಚುನಾವಣೆಗೂ ಮುನ್ನ ಇದೇ ವಿಚಾರವಾಗಿ ನಾನು ಸುದ್ದಿಗೋಷ್ಠಿ ಕರೆದಾಗ ನಮ್ಮ ಪಕ್ಷದವರೇ ಸುದ್ದಿಗೋಷ್ಠಿಯಲ್ಲಿ ಭಾಗವಹಿಸದೆ ಅವಮಾನ ಮಾಡಿದರು. ಹಾಗಾಗಿ ನಾನು ಈಗಿನ ಹೋರಾಟದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರ ಕ್ಷೇತ್ರಕ್ಕೆ ನೀರು ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಅವರ ಕ್ಷೇತ್ರದ ಅಭಿವೃದ್ದಿ ಚಿಂತೆ ಅವರಿಗೆ, ಆದರೆ ನಮ್ಮ ಜಿಲ್ಲೆಗೆ ಆಗುವ ತೊಂದರೆಗಳನ್ನು ಅವರಿಗೆ ಮನದಟ್ಟು ಮಾಡಿಕೊಟ್ಟು ಯೋಜನೆ ಆಗದಂತೆ ತಡೆಯಬೇಕಿದೆ. ಇಲ್ಲದಿದ್ದರೆ ಗುಬ್ಬಿಯಿಂದ ಕೆಳಗಡೆಗೆ ಭಾಗಗಳಿಗೆ ಭವಿಷ್ಯದಲ್ಲಿ ನೀರು ಸಿಗಲ್ಲ. ಇದನ್ನು ಶಿರಾ, ಮಧುಗಿರಿ, ಕೊರಟಗೆರೆ ಉಳಿದ ಭಾಗಗಳ ಜನಪ್ರತಿನೀಧಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಜೆ.ಸಿ.ಮಾಧುಸ್ವಾಮಿ ನುಡಿದರು.
ಚುನಾಯಿತ ಶಾಸಕರ ಮೇಲೆ ಹೈಕಮಾಂಡ್ ಹೆಸರಿನಲ್ಲಿ ದಬ್ಬಾಳಿಕೆ ಸರಿಯಲ್ಲ. ಶಾಸಕರು ಸರ್ವ ಸ್ವತಂತ್ರರು, ಪಕ್ಷದ ಶಿಸ್ತಿನ ಹೆಸರಿನಲ್ಲಿ ಅವರ ಅಧಿಕಾರ ಮೊಟಕುಗೊಳಿಸುವುದು ಸರಿಯಲ್ಲ. ಅದು ಯಾವುದೇ ಪಕ್ಷದಲ್ಲಿ ಇಂತಹ ನಡವಳಿಕೆ ಒಳ್ಳೆಯ ಬೆಳವಣಿಗೆಯಲ್ಲ. ಮಾಸ್ ಲೀಡರ್ ಶಿಪ್ ನಲ್ಲಿ ಚುನಾವಣೆ ಎದುರಿಸಿ, ಯಾರಿಗೋ ಒಬ್ಬರಿಗೆ ಅದರ ಕ್ರೆಡಿಟ್ ಕೊಡುವುದು ತರವಲ್ಲ. ಈ ಹಿಂದೆ ಬಿ.ಎಸ್.ವೈ. ಹೆಸರಿನಲ್ಲಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಾಗ ನಾವು ಯಾರು ಪ್ರಶ್ನೆ ಮಾಡಲಿಲ್ಲ ಎಂದು ಇತ್ತಿಚಿನ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ಭೇಟಿಗೆ ರಾಜಕೀಯ ಬಣ್ಣ ಬೇಡ. ಬೆಂಗಳೂರಿನಲ್ಲಿ ಹಾಸ್ಟಲ್ ಗೆ ಮತ್ತೊಂದಿಷ್ಟು ಜಾಗದ ಅಗತ್ಯವಿತ್ತು. ಅದರ ಬಗ್ಗೆ ಮಾತನಾಡಲು ಸಿದ್ದರಾಮಯ್ಯರನ್ನು ಭೇಟಿಯಾಗಿದ್ದೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜಕೀಯ ವಿಚಾರಗಳ ಚರ್ಚೆ ನಡೆದಿಲ್ಲ. ಸಿದ್ದರಾಮಯ್ಯ ಮಾಗಿದ್ದಾರೆ. ವಯಸ್ಸಾಗಿದೆ ಎಂದರು.