ತುಮಕೂರು | ತುಮುಲ್‍ನಲ್ಲಿ ದಲಿತ ಅಧಿಕಾರಿಗೆ ಕಿರುಕುಳ ಆರೋಪ; ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿರುವ ನೌಕರ
ತುಮುಲ್‍ನಲ್ಲಿ ದಲಿತ ಅಧಿಕಾರಿಗೆ ಕಿರುಕುಳ ಆರೋಪ; ನೆಲದ ಮೇಲೆ ಕುಳಿತ ಕೆಲಸ ಮಾಡುತ್ತಿರುವ ನೌಕರ
ತುಮಕೂರು : ದಲಿತನೆಂಬ ಕಾರಣಕ್ಕೆ ತುಮಕೂರು ಮಿಲ್ಕ್ ಯೂನಿಯನ್‌ನಲ್ಲಿ ಇರುವ ಆಡಳಿತ ಅಧೀಕ್ಷರ ಹುದ್ದೆಯಲ್ಲಿರುವ ವ್ಯಕ್ತಿಗೆ ನೀಡಿದ್ದ ಚೇರು, ಟೇಬಲ್ ಕಿತ್ತುಕೊಂಡು, ಕಿರುಕುಳ ನೀಡಿ, ನೆಲದ ಮೇಲೆಯೇ ಕುಳಿತ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಸಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ತುಮಕೂರು ಮಿಲ್ಕ್ ಯೂನಿಯನ್‌ನಲ್ಲಿ ಲೆಕ್ಕಪತ್ರ ವಿಭಾಗದ ಆಡಳಿತ ಅಧೀಕ್ಷಕನಾಗಿರುವ ವಿನಯ್ ಎಂಬ 35 ವರ್ಷದ ದಲಿತ ಅಧಿಕಾರಿಯನ್ನು ತುಮುಲ್‍ನ ಮೇಲ್ವರ್ಗಕ್ಕೆ ಸೇರಿದ ಮೇಲಿನ ಅಧಿಕಾರಿಗಳು ಕಿರುಕುಳ ನೀಡಿ, ತಾವೇ ಸ್ವತಃ ಹುದ್ದೆ ತೊರೆದು ಹೋಗುವಂತಹ ಮಾನಸಿಕ ಹಿಂಸೆ ನೀಡುತಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತ ಅಧಿಕಾರಿ ವಿನಯ್ ತಿಳಿಸಿದ್ದಾರೆ.
ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲೂಕು ಅವರೇ ಮಾಳ್ಯ ರಾಮಪುರದ ನಿವಾಸಿಯಾದ ವಿನಯ್ ಎಂ.ಕಾಂ, ಎಂಬಿಎ ಪದವಿ ಪಡೆದಿದ್ದಾರೆ.
ʼಕಳೆದ ಎಂಟು ವರ್ಷಗಳಿಂದ ತುಮುಲ್‍ನಲ್ಲಿ ಆಡಳಿತ ಅಧೀಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದು, ತುಮುಲ್‍ನಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿರುವ ಮೇಲ್ಜಾತಿಗೆ ಸೇರಿದ ಉಮೇಶ್ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಮಂಜುನಾಥ ನಾಯಕ್ ಎಂಬ ಇಬ್ಬರು ಕಳೆದ ಎಂಟು ತಿಂಗಳಿನಿಂದ ಕಿರುಕುಳ ನೀಡುತ್ತಿದ್ದು, ನಾನು ಮಾನಸಿಕವಾಗಿ ಕುಗ್ಗಿ ಹೋಗುವಂತೆ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಲು ಮುಂದಾಗಿದ್ದಾರೆ. ನಾನು ಅವರ ಫೇವರ್ ಆಗಿ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ನನಗೆ ನೀಡಿದ್ದ ಕುರ್ಚಿ, ಟೇಬಲ್‍ಗಳನ್ನು ಕಿತ್ತುಕೊಂಡು ನೆಲದ ಮೇಲೆ ಕುಳಿತು ಕೆಲಸ ಮಾಡುವಂತೆ ಮಾಡಿದ್ದಾರೆ. ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಎಸ್.ಪಿ.ಅವರಿಗೆ ದೂರು ನೀಡಿದ್ದರೂ ಇದುವರೆಗೂ ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿರುದ್ದ ಎಫ್.ಐ.ಆರ್.ದಾಖಲಿಸಿಲ್ಲ. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರ (ಎಂಡಿ)ಸೂಚನೆ ಮೇರೆಗೆ, ಇಷ್ಟು ದಿನ ನಾನು ನೆಲದ ಮೇಲೆ ಕುಳಿತುಕೊಳ್ಳಲು ಬಳಸುತ್ತಿದ್ದ ಪ್ಲಾಸ್ಟಿಕ್ ಚೀಲವನ್ನೂ ಕಸಿದುಕೊಂಡಿದ್ದಾರೆ. ಈಗ ಬರೀ ನೆಲದ ಮೇಲೆ ಕುಳಿತು ಕೆಲಸ ಮಾಡುತ್ತಿದ್ದೇನೆ. ಉಮೇಶ್ ಎಸ್ ಮತ್ತು ಮಂಜುನಾಥ್ ನಾಯಕ್ ಎಂಬುವವರು ಸೇರಿಕೊಂಡು, ವೃತ್ತಿ ವೈಷಮ್ಯದಿಂದ ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಅವರ ಕಿರುಕುಳದ ಬಗ್ಗೆ ಗೊತ್ತಿದ್ದರೂ ವ್ಯವಸ್ಥಾಪಕ ನಿರ್ದೇಕರಾದ (ಎಂಡಿ) ಶ್ರೀನಿವಾಸನ್ ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆʼ ಎಂದು ಸಂತ್ರಸ್ತ ಅಧಿಕಾರಿ ವಿನಯ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.