×
Ad

ತುಮಕೂರು | ಬೆಳ್ತಂಗಡಿಯ ಮೂವರ ಹತ್ಯೆ ಪ್ರಕರಣ : ಇಬ್ಬರ ಬಂಧನ

Update: 2024-03-25 19:47 IST

ತುಮಕೂರು: ಕುಚ್ಚಂಗಿ ಕೆರೆ ಹತ್ತಿರ ಕಾರೊಂದರಲ್ಲಿ ಮೂವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿರುವ ಪೊಲೀಸರು, ಇನ್ನೂ ಆರು ಜನರ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ.ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ 22ರಂದು ಮಧ್ಯಾಹ್ನ ಸುಮಾರು 1-15 ಗಂಟೆಗೆ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ಒಂದು ಕಾರಿನಲ್ಲಿ ಮೂವರು ವ್ಯಕ್ತಿಗಳ ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಸ್ಥಳ ಪರಿಶೀಲಿಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದರು.

ಸ್ಥಳದಲ್ಲಿ ದೊರೆತ ಸಾಕ್ಷ್ಯಗಳು, ಸ್ಥಳೀಯ ಮಾಹಿತಿ, ತಾಂತ್ರಿಕ ಮತ್ತು ವೈಜ್ಞಾನಿಕ ವಿಧಾನದ ಮೂಲಕ ಕೊಲೆಗೀಡಾಗಿರುವ ವ್ಯಕ್ತಿಗಳು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಇಶಾಕ್ (54 ) ಶಾಹುಲ್ ಹಮೀದ್ (45)  ಸಿದ್ದೀಕ್ (34)  ಎಂದು ಪತ್ತೆ ಹಚ್ಚಲಾಗಿತ್ತು.

ಪ್ರಕರಣ ಸಂಬಂಧ  ಶಿರಾ ಗೇಟ್‍ನಲ್ಲಿ ವಾಸವಿರುವ ಪಾತರಾಜು (35)  ಗಂಗರಾಜು (35)  ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಮೃತರು ಪಾತರಾಜನ ಜೊತೆ ಸೇರಿ ಸುಮಾರು 6-7 ತಿಂಗಳಿನಿಂದ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದು, ಪಾತರಾಜನಿಗೆ ಸುಮಾರು 6 ಲಕ್ಷರೂ. ಹಣ ನೀಡಿದ್ದರು. ಹಣ ನೀಡಿ 6 ತಿಂಗಳು ಕಳೆದರೂ ನಿಧಿ ಹುಡುಕಿ ಕೊಟ್ಟಿಲ್ಲವಾದ್ದರಿಂದ ಹಣ ವಾಪಸ್ ಕೊಡುವಂತೆ ಇಲ್ಲವಾದರೆ ಪೊಲೀಸರಿಗೆ ದೂರು ನೀಡುವುದಾಗಿ ಮೃತರು ಎಚ್ಚರಿಸಿದ್ದರು. 

ಇದರಿಂದ ಆರೋಪಿ ಪಾತರಾಜ ತನ್ನ ಪರಿಚಯದ  ಗಂಗರಾಜು ಮತ್ತು ಅವನ 6 ಜನ ಸಹಚರರಾದ  ಮಧುಸೂಧನ್,  ನವೀನ್, ಕೃಷ್ಣ,  ಗಣೇಶ, ಕಿರಣ್, ಸೈಮನ್ ಅವರನ್ನು ಸೇರಿಸಿಕೊಂಡು ಸಂಚು ರೂಪಿಸಿ, ಚಿನ್ನಕೊಡುವುದಾಗಿ ಮೂರು ಜನರನ್ನು ಬೀರನಕಲ್ಲು ಗ್ರಾಮಕ್ಕೆ ಕರೆಯಿಸಿಕೊಂಡು ಕೊಲೆ ಮಾಡಿ, ಸಾಕ್ಷ ನಾಶ ಪಡಿಸುವ ಉದ್ದೇಶದಿಂದ ಕುಚ್ಚಂಗಿ ಕೆರೆಗೆ ತಂದು ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

ತುಮಕೂರು ಪೊಲೀಸರ ಈ ಕಾರ್ಯವನ್ನು ಕೇಂದ್ರ ವಲಯದ ಪೊಲೀಸ್ ಮಹಾನಿರೀಕ್ಷಕರಾದ ರವಿಕಾಂತೇಗೌಡ, ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ಐ.ಪಿ.ಎಸ್ ರವರು ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News