ತುಮಕೂರು | ಎಚ್‌.ಡಿ.ದೇವೇಗೌಡ ಅವರ ಭದ್ರತೆಯಲ್ಲಿ ವೈಫಲ್ಯ ; ಕ್ರಮಕ್ಕೆ ಬಿಜೆಪಿ-ಜೆಡಿಎಸ್ ಒತ್ತಾಯ

Update: 2024-04-16 12:39 GMT

ತುಮಕೂರು: ನಗರದ ಕುಂಚಿಟಿಗ ಸಮುದಾಯದ ಭವನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಕಾರ್ಯಕರ್ತರ ಸಭೆಯಲ್ಲಿ ವೇದಿಕೆಗೆ ನುಗ್ಗಿದ ಕೈ ಮಹಿಳಾ ಕಾರ್ಯಕರ್ತೆಯರನ್ನು ಬಂಧಿಸಬೇಕು ಹಾಗೂ ಭದ್ರತೆ ಒದಗಿಸುವಲ್ಲಿ ವಿಫಲರಾಗಿರುವ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಎಸ್.ಸುರೇಶ್‍ಕುಮಾರ್ ನೇತೃತ್ವದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾನೂನು ವಿಭಾಗದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಭದ್ರತಾ ಲೋಪಕ್ಕೆ ಕಾರಣರಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಸೇವೆಯಿಂದ ಅಮಾನತ್ತುಗೊಳಿಸಬೇಕು. ಈ ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ಕುಮ್ಮಕ್ಕು ನೀಡಿದವರನ್ನು ಬಂಧಿಸಬೇಕು. ಯಾವುದೇ ಸಭೆಗೆ ಅನುಮತಿ ಕೇಳಿದಾಗ ಮುಂದಿನ ದಿನಗಳಲ್ಲಿ ಸಮರ್ಪಕ ಭದ್ರತಾ ವ್ಯವಸ್ಥೆಗಳನ್ನು ಮಾಡುವ ಕುರಿತು ಭರವಸೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮೋಹನ್‍ಕುಮಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಸುರೇಶ್‍ಕುಮಾರ್, ರಾಜ್ಯದಲ್ಲಿ ಮಹಿಳೆಯರ ನಡುವೆ ವೈಷಮ್ಯ ಹುಟ್ಟು ಹಾಕಿ ಅಶಾಂತಿ ಸೃಷ್ಟಿಸುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಸದಾ ಜನರನ್ನು ಎತ್ತಿಕಟ್ಟುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ರಾಜಣ್ಣನವರ ಪ್ರಚೋದನೆಯಿಂದ ಈ ಘಟನೆ ನಡೆದಿದೆ. ಪಕ್ಷದ ಕಾರ್ಯಕರ್ತರು ಮತ್ತು ಮತದಾರರಲ್ಲಿ ಭಯವನ್ನು ಹುಟ್ಟು ಹಾಕುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪ್ರಚಾರವನ್ನು ತಪ್ಪಿಸುವ ಏಕೈಕ ಉದ್ದೇಶದಿಂದ. ಘಟನೆ ನಡೆದಾಗ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಮಾಜಿ ಪ್ರಧಾನ ಮಂತ್ರಿಯ ಕಾರ್ಯಕ್ರಮದಲ್ಲಿ ಉಂಟಾಗಿರುವ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸೂಕ್ತ ತನಿಖೆಯೊಂದಿಗೆ ಈ ಪಿತೂರಿಯ ಹಿಂದೆ ಇರುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾನೂನು ಘಟಕದ ರಾಜ್ಯಾಧ್ಯಕ್ಷ ವಸಂತಕುಮಾರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪರಾಜು, ಹಿಮಾನಂದ್, ಬ್ಯಾಟರಂಗೇಗೌಡ, ವಕೀಲರಾದ ರೇಖಾ ರಾಜುಗೌಡ, ರವಿಗೌಡ, ಮಹೇಶ್, ರೇಣುಕೇಶ್, ಪ್ರಕಾಶ್‍ರಾವ್, ರಮೇಶ್, ನವೀನ್ ಚಂದ್ರಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News