×
Ad

ತುಮಕೂರು | ಪತ್ರಕರ್ತನಿಗೆ ಜಾತಿ ನಿಂದನೆ, ಹಲ್ಲೆ ಆರೋಪ: ಪಬ್ಲಿಕ್ ಟಿವಿ ವರದಿಗಾರನ ಬಂಧನ

Update: 2025-05-25 11:21 IST

ಮಂಜುನಾಥ್ ತಾಳಮಕ್ಕಿ

ತುಮಕೂರು: ಸಹೋದ್ಯೋಗಿ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆಗೈದಿರುವ ಆರೋಪದಡಿ ತುಮಕೂರು ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಮಂಜುನಾಥ್ ತಾಳಮಕ್ಕಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಝೀ ಕನ್ನಡ ನ್ಯೂಸ್ ವರದಿಗಾರ ಜಿ.ಎನ್.ಮಂಜುನಾಥ್ (ಸಮಯ ಮಂಜು) ಎಂಬವರು ನೀಡಿರುವ ದೂರಿನ ಮೇರೆಗೆ ತಿಲಕ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ವಿವರ: ಮೇ 21ರಂದು ಬೆಳಗ್ಗೆ ನಗರದ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ನಡೆದ ಈ.ಡಿ. ದಾಳಿಯ ವರದಿ ಮಾಡಲು ಝೀ ಕನ್ನಡ ನ್ಯೂಸ್ ವರದಿಗಾರ ಮಂಜುನಾಥ್ ತೆರಳಿದ್ದರು. ಈ ವೇಳೆ ಪಬ್ಲಿಕ್ ಟಿವಿ ವರದಿಗಾರ ಮಂಜುನಾಥ್ ತಾಳಮಕ್ಕಿ, "ಏನಲೇ ನೀನು ಬಂದಿದ್ದೀಯಾ, ನಿನಗೆ ನೀನೇ ಮಹಾ ಬುದ್ಧಿವಂತ ಅಂದ್ಕೊಂಡಿದ್ದೀಯಾ, ಏನೇ ಮಾಡಿದರೂ ಕೀಳು ಜಾತಿನೇ, ಕೀಳು ಜಾತಿ ಬುದ್ಧಿ ಬಿಡಲ್ಲ, ಮಾದಿಗರ ಬುದ್ಧಿ ಲದ್ದಿ" ಎಂದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೇ ತಾನು ಪ್ರತಿನಿಧಿಸುವ ಸುದ್ದಿವಾಹಿನಿಯ ಲೋಗೋವಿದ್ದ ಮೈಕ್ ನಿಂದ ತನ್ನ ತಲೆ ಮತ್ತು ಕಿವಿಗೆ ಹಲ್ಲೆ ನಡೆಸಿದ್ದಾನೆ ಎಂದು ತಿಲಕ್ ಪಾರ್ಕ್ ಠಾಣೆಗೆ ನೀಡಿರುವ ದೂರಿನಲ್ಲಿ ಜಿ.ಎನ್.ಮಂಜುನಾಥ್ ಆರೋಪಿಸಿದ್ದಾರೆ.

ಹಲ್ಲೆಯಿಂದ ಜಿ.ಎನ್.ಮಂಜುನಾಥ್ ಅವರ ಕಿವಿ, ಬಲ ಕುತ್ತಿಗೆಯ ಬಳಿ ರಕ್ತ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ.

ಇವರು ನೀಡಿದ ದೂರಿನ ಅನ್ವಯ ತನಿಖಾಧಿಕಾರಿಯಾಗಿರುವ ಮಧುಗಿರಿ ಡಿವೈಎಸ್ಪಿ ಅವರು ಆರೋಪಿ ಮಂಜುನಾಥ್ ತಾಳಮಕ್ಕಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News