×
Ad

ಮೀನುಗಾರರು ಜೀವ, ಆತ್ಮರಕ್ಷಣೆಗೆ ಆದ್ಯತೆ ನೀಡಬೇಕು: ಲಕ್ಷ್ಮಿ ಹೆಬ್ಬಾಳ್ಕರ್

‘ಮೀನುಗಾರಿಕೆಯಲ್ಲಿ ಜೀವರಕ್ಷಕ ಸಾಧನಗಳ ಅಗತ್ಯತೆ’ ಕಾರ್ಯಾಗಾರ

Update: 2025-08-14 21:12 IST

ಉಡುಪಿ, ಆ.14: ಕರಾವಳಿ ಜಿಲ್ಲೆಗಳ ಮೀನುಗಾರರು ಮೀನುಗಾರಿಕಾ ಚಟುವಟಿಕೆಗಳನ್ನು ಕೈಗೊಳ್ಳುವ ಸಂದರ್ಭ ದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಇದಕ್ಕಾಗಿ ಅಗತ್ಯ ಸುರಕ್ಷತಾ ಸಾಧನಗಳನ್ನು ತಪ್ಪದೇ ಬಳಸಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಮೀನುಗಾರಿಕೆ ಇಲಾಖೆಗಳ ಜಂಟಿ ಆಶ್ರಯದಲ್ಲಿ ಗುರುವಾರ ಆಯೋಜಿಸಲಾದ ‘ಮೀನುಗಾರಿಕೆಯಲ್ಲಿ ಜೀವರಕ್ಷಕ ಸಾಧನಗಳ ಪ್ರಾಮುಖ್ಯತೆ’ ಕುರಿತು ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದ ಆರ್ಥಿಕತೆಯತೆಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿರುವ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮೀನುಗಾರರಿಗೆ ಸರಕಾರವೂ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಅವರ ಹಿತಾಸಕ್ತಿಗಳನ್ನು ಕಾಪಾಡಲು ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಎಂದವರು ಹೇಳಿದರು.

ಮೀನುಗಾರಿಕೆಗೆ ತೆರಳುವ ಮೀನುಗಾರರ ಸುರಕ್ಷತೆಗೆ ಸರಕಾರ ‘ಲೈಫ್ ಜಾಕೆಟ್’ ನೀಡುವುದು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ವೃತ್ತಿ ಬದುಕಿಗಾಗಿ ತಮ್ಮ ಜೀವದ ಹಂಗು ತೊರೆದು ಸಮುದ್ರಕ್ಕಿಳಿಯುವ ಮೀನುಗಾರರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದವರು ಕಿವಿಮಾತು ಹೇಳಿದರು.

ಮಳೆಗಾಲದ ಪ್ರಾರಂಭದಲ್ಲಿ ಎರಡು ತಿಂಗಳು ಸಮುದ್ರ ಪ್ರಕ್ಷುಬ್ಧ ಗೊಂಡಿ ರುವ ಸಮಯದಲ್ಲಿ ಮೀನುಗಾರಿಕೆಗೆ ನಿಷೇಧವಿರುತ್ತದೆ. ಈ ಅವಧಿಯಲ್ಲಿ ಮೀನುಗಾರ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಉಳಿತಾಯ ಹಾಗೂ ಪರಿಹಾರ ಯೋಜನೆಯಡಿ ರಾಜ್ಯದ ವಂತಿಗೆಯನ್ನು ಹೆಚ್ಚಿಸಲಾಗಿದೆ. ಮೀನುಗಾರರಿಗೆ ಪ್ರತಿವರ್ಷ ವಿವಿಧ ಜೀವರಕ್ಷಕ ಸಾಧನಗಳನ್ನು ರಾಜ್ಯ ಸರಕಾರದ ವತಿಯಿಂದ ನೀಡಲಾಗುತ್ತಿದೆ ಎಂದರು.

ಮೀನುಗಾರಿಕೆ ಸಂದರ್ಭದಲ್ಲಿ ಮೀನುಗಾರರು ಜೀವ ಹಾಗೂ ಆತ್ಮರಕ್ಷಣೆಗೆ ವಿಶೇಷ ಗಮನ ನೀಡಬೇಕು. ಕಳೆದ ಐದು ವರ್ಷಗಳಲ್ಲಿ ಮೀನುಗಾರಿಕಾ ಚಟುವಟಿಕೆಗಳ ಸಂದರ್ಭದಲ್ಲಿ 141 ಮಂದಿ ತಮ್ಮ ಪ್ರಾಣಗಳನ್ನು ಕಳೆದು ಕೊಂಡಿದ್ದಾರೆ. ಮೀನುಗಾರಿಕೆ ವೇಳೆ ಜೀವರಕ್ಷಕ ಸಾಧನೆಗಳ ಬಳಕೆಯಿಂದ ಪ್ರಾಣಾಪಾಯದಿಂದ ಪಾರಾಗಲು ಸಾಧ್ಯವಿದೆ. ಇದನ್ನು ಪ್ರತಿಯೊಬ್ಬ ಮೀನುಗಾರರು ಸಮುದ್ರಕ್ಕೆ ಇಳಿಯುವ ವೇಳೆ ತಪ್ಪದೇ ಬಳಸಬೇಕು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಾಸ್ತಾಕವಾಗಿ ಮಾತನಾಡಿ, ಜಿಲ್ಲೆಯಲ್ಲಿ 98 ಕಿ.ಮೀ ಗೂ ಹೆಚ್ಚು ಕಡಲತೀರ ಹೊಂದಿದ್ದು, 2 ಲಕ್ಷಕ್ಕೂ ಹೆಚ್ಚು ಜನ ಮೀನುಗಾರಿಕಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಜಿಲ್ಲೆಯಲ್ಲಿ  ಮೀನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು 9328 ಮೋಟಾರೀಕೃತ ಸಾಂಪ್ರದಾುಕ ನಾಡದೋಣಿಗಳು, ಯಾಂತ್ರೀಕೃತ ದೋಣಿಗಳು ಹಾಗೂ ಪಾತಿ ದೋಣಿಗಳೂ ಕಾರ್ಯ ನಿರ್ವಸುತ್ತಿವೆ. ಮೀನುಗಾರಿಕೆಯ ವೇಳೆ ಅವರು ತಮ್ಮ ಜೀವ ರಕ್ಷಣೆಯೊಂದಿಗೆ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಬೇಕು. ಆದರೆ ಕೆಲವೊಂದು ದುರ್ಘಟನೆಗಳಿಂದ ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಾರೆ. ಸುರಕ್ಷತಾ ಸಾಧನೆ ಬಳಸಬೇಕೆಂದ ಇದನ್ನು ತಪ್ಪಿಸಬಹುದು.ಈ ನ್ನೆಲೆಯಲ್ಲಿ ಅರಿವು ಮೂಡಿಸಲು ಈ ಕಾರ್ಯಕ್ರಮವನ್ನು ಹ್ಮುಕೊಳ್ಳಲಾಗಿದೆ ಎಂದರು.

ಸುರಕ್ಷತಾ ಸಾಧನ ವಿತರಣೆ: ಇದೇ ಸಂದರ್ಭದಲ್ಲಿ ಮೀನುಗಾರರಿಗೆ ನಿವೇಶನ ಹಕ್ಕುಪತ್ರ ಹಾಗೂ ಮನೆ ಮಂಜೂರಾತಿ ಹಕ್ಕುಪತ್ರವನ್ನು ಸಚಿವರು ವಿತರಿಸಿದರು. ಜೊತೆಗೆ ಉಳಿತಾಯ ಪರಿಹಾರ ಯೋಜನೆಯಡಿ ಮೀನುಗಾರಿಕಾ ಸಹಕಾರಿ ಸಂಘಗಳ ಫಲಾನುಭವಿಗಳಿಗೆ ತಲಾ 3000ರೂ.ಗಳ ಚೆಕ್ ವಿತರಣೆ, ಮೀನುಗಾರರಿಗೆ ಜೀವರಕ್ಷಕ ಸುರಕ್ಷತಾ ಸಾಧನಗಳನ್ನು ಸಹ ಸಚಿವೆ ಹೆಬ್ಬಾಳ್ಕರ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ರಾಜ್ಯ ಸಂಕಷ್ಟ ಪರಿಹಾರ ನಿಧಿ ಸಮಿತಿಯ ಸದಸ್ಯ ಮದನ್‌ಕುಮಾರ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಪಂ ಸಿಇಓ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್‌ಶಂಕರ್, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಉಪಸ್ಥಿತರಿದ್ದರು.

ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್ ಆರ್ ಸ್ವಾಗತಿಸಿದರು. ಮಧುಕರ್ ಕಾರ್ಯಕ್ರಮ ನಿರೂಪಿಸಿ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ ವಂದಿಸಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News