ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ
Update: 2025-08-21 22:03 IST
ಉಡುಪಿ, ಆ.21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನ ವಾಗಿ ತೆರೆಯಲಾದ ಅಕ್ಕ ಕೆಫೆ ಕಾರ್ಯಾರಂಭ ಮಾಡಿದ್ದು, ಸಂಜೀವಿನಿ ಮಹಿಳೆಯರು ತಯಾರಿಸಿದ ರುಚಿಕಟ್ಟಾದ ಉಟೋಪಹಾರಗಳು ಕಡಿಮೆದರಲ್ಲಿ ದೊರೆಯಲಿದೆ.
ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಅನುಷ್ಠ್ಠಾನಕ್ಕೆ ತಂದ ಅಕ್ಕ ಕೆಫೆ ಯೋಜನೆಯು ದುಡಿಯುವ ಮಹಿಳೆಯರ ಕೈಗಳಿಗೆ ಕೆಲಸ ನೀಡುವ ಜೊತೆಗೆ ಕಡಿಮೆ ದರದಲ್ಲಿ ಶುಚಿ, ರುಚಿಯಾದ ಊಟ ಉಪಾಹಾರ ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಪ್ರಸ್ತುತ ಕಲ್ಯಾಣಪುರ ಗ್ರಾಮ ಪಂಚಾಯತ್‌ನ ಬ್ರಹ್ಮಶ್ರೀ ಸಂಜೀವಿನಿ ಒಕ್ಕೂಟದ ಮಹಿಳೆಯರು ಅಕ್ಕ ಕೆಫೆಯನ್ನು ನಿರ್ವಹಿಸಲಿದ್ದು, ಈಗಾಗಲೇ ಕ್ಯಾಟರಿಂಗ್ ಉದ್ಯಮದಲ್ಲಿ ಅನುಭವ ಹೊಂದಿರುವ ಇವರು ಆಹಾರ ತಯಾರಿಕೆಯಲ್ಲಿ ಪರಿಣಿತಿ ಹೊಂದಿದ್ದಾರೆ. ಈ ಅಕ್ಕ ಕೆಫೆಯನ್ನು ಸಂಪೂರ್ಣ ವಾಗಿ ಸಂಜೀವಿನಿ ಮಹಿಳೆಯರೇ ನಿರ್ವಹಿಸುತ್ತಿರುವುದು ಒಂದು ವಿಶೇಷವಾಗಿದೆ.