×
Ad

ರಾಣಿ ಅಬ್ಬಕ್ಕ ಸ್ವಾಭಿಮಾನ, ದೇಶಾಭಿಮಾನದ ಪ್ರತೀಕ: ಡಾ.ಪ್ರಜ್ಞಾ ಮಾರ್ಪಳ್ಳಿ

Update: 2025-08-25 21:22 IST

ಶಿರ್ವ, ಆ.25: 16ನೇ ಶತಮಾನದಲ್ಲಿ ಕರಾವಳಿಯ ತುಳುನಾಡನ್ನು ಆಳಿದ ಧೀರ ಮಹಿಳೆ ಉಳ್ಳಾಲದ ರಾಣಿ ಅಬ್ಬಕ್ಕ. ಪೋರ್ಚುಗೀಸ್ ವಸಾಹತು ಶಾಹಿ ಶಕ್ತಿಯ ವಿರುದ್ಧ ಹೋರಾಡಿದ ಈ ನೆಲದಲ್ಲಿ ಅಬ್ಬಕ್ಕನ ಸ್ಮರಣೆ ಮಾಡಬೇಕಾಗಿದೆ. ಉಳ್ಳಾಲದ ರಾಣಿ ಅಬ್ಬಕ್ಕ ಸ್ವಾಭಿಮಾನ, ದೇಶಾಭಿಮಾನದ ಪ್ರತೀಕವಾಗಿದ್ದಾರೆ ಎಂದು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಮತ್ತು ಮುಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ಸಾಹಿತ್ಯ ಸಂಘ ಹಾಗೂ ಮಾನವಿಕ ಸಂಘಗಳ ಆಶ್ರಯದಲ್ಲಿ ಸೋಮವಾರ ಶಿರ್ವದ ಮುಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನಲ್ಲಿ ಆಯೋಜಿಸಲಾದ ಅಬ್ಬಕ್ಕ -500 ಪ್ರೇರಣಾದಾಯಿ ಉಪನ್ಯಾಸ ಸರಣಿ-27 ಕಾರ್ಯ ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಹೆಣ್ಣು ಸಹನೆ ಕಳೆದುಕೊಂಡಾಗ ಉಗ್ರರೂಪಿಯಾಗಿ ಎದುರಿಸುವ ಸಾಮರ್ಥ್ಯ ಹೊಂದಿ ದಿಟ್ಟತನ, ಧೈರ್ಯದಿಂದ ಹೋರಾಟ ನೀಡಿ ತಮ್ಮತನವನ್ನು ಯಾವತ್ತೂ ಬಿಟ್ಟು ಕೊಡದ ಧೀರೆ. ಅಚಲವಾದ ದೇಶಭಕ್ತಿ, ಮಹಿಳಾ ಜಾಗೃತಿ, ಸ್ತ್ರೀಸಬಲೀಕರಣದಲ್ಲಿ ಮೊದಲಿಗರಾಗಿದ್ದಾರೆ. ರಾಣಿ ಅಬ್ಬಕ್ಕರವರ 500ನೇ ಜನುಮದಿನದ ವರ್ಷಾಚರಣೆಯ ಈ ಶುಭಾವಸರ ದಲ್ಲಿ ಮಹಿಳೆಯರಲ್ಲಿ ಆತ್ಮಾಭಿಮಾನ, ದೌರ್ಜನ್ಯ ತಡೆಗಟ್ಟಲು ಅಬ್ಬಕ್ಕನ ಜೀವನ ಪ್ರೇರಣೆ ಅಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಪರಕೀಯರ ವಿರುದ್ಧ ಸಮರ ಸಾರಿದ ದೇಶದ ಮೊದಲ ಹೋರಾಟಗಾರ್ತಿ ರಾಣಿ ಅಬ್ಬಕ್ಕನ ದೇಶಾಭಿಮಾನದ ಕಿಚ್ಚು ಇಂದಿಗೂ ಆದರ್ಶಪ್ರಾಯವಾಗಿದೆ. ದೇಶದ ಮಹಾಪುರುಷರ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮಕ್ಕಳಲ್ಲಿ ಕಥೆಗಳ ರೂಪದಲ್ಲಿ ಬೆಳೆಸಿ ಭವಿಷ್ಯದ ಭಾರತವನ್ನು ಕಟ್ಟಲು ಪ್ರೇರಣೆ ನೀಡಬೇಕು ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ.ಮಿಥುನ್ ಚಕ್ರವರ್ತಿ ವಹಿಸಿದ್ದರು. ನಿಟ್ಟೆ ಎನ್‌ಎಂಎಎಂಐಟಿ ಪ್ರಾಧ್ಯಾಪಕ ಡಾ.ಸುರೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಆರ್‌ಎಂಎಸ್‌ನ ಆಯೋಜಕ ಡಾ.ಭೈರವಿ ಪಾಂಡ್ಯ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಇತಿಹಾಸ ಮತ್ತು ಪುರಾತತ್ವ ವಿಭಾಗದ ಉಪನ್ಯಾಸಕಿ ಪ್ರಶಾಂತಿ, ಕನ್ನಡ ವಿಭಾಗದ ವರಮಹಾಲಕ್ಷ್ಮೀ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News