ಗ್ಯಾರಂಟಿ ಯೋಜನೆಯಿಂದ ಸರಕಾರಕ್ಕೆ ನಷ್ಟ ಇಲ್ಲ: ಜಯಪ್ರಕಾಶ್ ಹೆಗ್ಡೆ
ಉಡುಪಿ, ಸೆ.4: ಗ್ಯಾರಂಟಿ ಯೋಜನೆಯಿಂದ ಸರಕಾರಕ್ಕೆ ಯಾವುದೇ ನಷ್ಟ ಉಂಟಾಗುವುದಿಲ್ಲ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಈ ವರ್ಷವೂ ಕೂಡ ರಾಜ್ಯ ತನ್ನ ಪರ್ ಕ್ಯಾಪಿಟನ್ ಇನ್ಕಮ್‌ನಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ, ಮಂಜುನಾಥ ಉದ್ಯಾವರರವರ ಸಂಸ್ಕರಣ ಕಾರ್ಯಕ್ರಮ ‘ಮಂಜಣ್ಣನ ನೆನಪು ಹದಿಮೂರು’ ಅಂಗವಾಗಿ ವಿಠೋಬ ರುಖುಮಾಯಿ ನಾರಾಯಣ ಗುರು ಮಂದಿರ ದಲ್ಲಿ ಜರಗಿದ ವೈದ್ಯಕೀಯ ನೆರವು ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತಿದ್ದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಅಧ್ಯಾಪಕ ಗಣಪತಿ ಕಾರಂತ ಮಾತನಾಡಿದರು. ಈ ಸಂದರ್ಭದಲ್ಲಿ ಸುಮಾರು ಒಂದು ಲಕ್ಷ ರೂ. ಮೊತ್ತದ ವೈದ್ಯಕೀಯ ನೆರವು ವಿತರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಕಾರ್ಯದರ್ಶಿ ಆಶಾವಾಸು ಫಲಾನುಭವಿಗಳ ಹೆಸರು ವಾಚಿಸಿದರು. ಪ್ರಧಾನ ಕಾರ್ಯ ದರ್ಶಿ ಸುಹೇಲ್ ರಹಮತುಲ್ಲಾ ವಂದಿಸಿದರು. ಮಾಜಿ ಅಧ್ಯಕ್ಷ ಅನುಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಜ್ಞಾನಂ ಟ್ರಸ್ಟ್ ಉಡುಪಿ ಪ್ರಸ್ತುತಿಯಲ್ಲಿ ವಿದುಷಿ ಸಂಸ್ಕೃತಿ ಪ್ರಭಾಕರ್ ಅಭಿನಯಿಸಿದ ನಾಟ್ಯರಾಣಿ ಶಾಂತಲಾ ಆತ್ಮವೃತ್ತ ’ಹೆಜ್ಜೆಗೊಲಿದ ಬೆಳಕು’ ಏಕವ್ಯಕ್ತಿ ರಂಗ ಪ್ರಯೋಗ ಪ್ರದರ್ಶಗೊಂಡಿತು.