ಅಬ್ಬಕ್ಕಳ ಧೈರ್ಯ, ಸಾಹಸ ಆದರ್ಶವಾಗಬೇಕು: ವಸಂತ್ ಕುಮಾರ್
ಉಡುಪಿ, ಸೆ.20: ರಾಣಿ ಅಬ್ಬಕ್ಕರವರ ಬದುಕಿನ ಬಗೆಗೆ ಇಂದಿನ ಯುವಪೀಳಿಗೆ ಅರಿತು, ಅವರ ಧೈರ್ಯ, ಸಾಹಸ, ದೇಶಪ್ರೇಮವನ್ನು ತಮ್ಮೊಳಗೆ ಮೈಗೂಡಿಸಿಕೊಳ್ಳಬೇಕು ಎಂದು ಉಡುಪಿ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ವಸಂತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ಜಂಟಿ ಆಶ್ರಯದಲ್ಲಿ ಗುರುವಾರ ನಡೆದ ರಾಣಿ ಅಬ್ಬಕ್ಕ - ಯುಗಯುಗಗಳಿಂದ ಧೈರ್ಯದ ಪ್ರತಿಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಮೊದಲ ಬಾರಿಗೆ ನೌಕ ಪಡೆಯನ್ನು ಕಟ್ಟಿ, ಪೋರ್ಚುಗೀಸರಿಗೆ ಸೋಲಿನ ರುಚಿಯನ್ನು ಉಣಿಸಿದ ವೀರ ಮಹಿಳೆ ಅಬ್ಬಕ್ಕ. ಅವರ ಸಾಹಸಗಾಥೆಯನ್ನು ಓದಿ ಇಂದಿನ ಯುವಪೀಳಿಗೆ ಧೈರ್ಯ, ಸಾಹಸವನ್ನು ಕರಗತಮಾಡಿ ಕೊಳ್ಳ ಬೇಕು. ಮೊಬೈಲ್ ಎಂಬ ಮಾಯಜಾಲದೊಳಗೆ ಇಂತಹ ಅನೇಕ ಸಂಗತಿಗಳು ಅಡಗಿವೆ. ಕೇವಲ ಪಬ್ಜಿ ಆಟ, ಮನರಂಜನೆಗಾಗಿ ಮೊಬೈಲನ್ನು ಬಳಸದೇ, ಇಂತಹ ದೇಶಪ್ರೇಮದ ಸಂಗತಿಯನ್ನು ತಿಳಿಯಲು ಬಳಸಿಕೊಳ್ಳ ಬೇಕು ಎಂದರು.
ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಹೇಳುವಾಗ, ನಾವುಗಳು ಅನೇಕ ಹೋರಾಟಗಾರರ ಹೆಸರನ್ನು ಉಲ್ಲೇಖಿಸುತ್ತೇವೆ. ಆದರೆ ನಮ್ಮದೇ ನೆಲದ ಗಟ್ಟಿಗಿತ್ತಿ, ಸಿಂಹಿಣಿಯಂತೆ ಬದುಕಿದ ರಾಣಿ ಅಬ್ಬಕ್ಕಳ ಬಗ್ಗೆ ನಮಗೆಷ್ಟು ತಿಳಿದಿದೆ ಎಂದು ನಾವು ಪ್ರಶ್ನಿಸಿಕೊಳ್ಳಬೇಕು. ಇತಿಹಾಸದ ಅಧ್ಯಯನ ಅತೀ ಅಗತ್ಯ. ಅದರಲ್ಲೂ ನಮ್ಮ ನೆಲದ ಹೋರಾಟಗಾರರ ಬಗ್ಗೆ ನಾವು ಅಧ್ಯಯನ ನಡೆಸಿ, ಸಾಧ್ಯವಾದಷ್ಟು ಜ್ಞಾನವನ್ನು ಇತರರಿಗೆ ಧಾರೆ ಎರೆಯಬೇಕು ಎಂದು ಅವರು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲೆ ಸುರೇಖಾ. ಕೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ರಕ್ಷಿತಾ ಸ್ವಾಗತಿಸಿದರು. ದಿಶಾ ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪ್ರಾಧ್ಯಾಪಕಿ ಚೈತ್ರಾ ಕುಮಾರಿ ನಿರ್ವಹಿಸಿದರು.