ಬೈಂದೂರು-ಉಳ್ಳಾಲ ಕಡಲ ಕಿನಾರೆಯಲ್ಲಿ ಪ್ರಯಾಣಿಕರ ಬೋಟು ಆರಂಭಿಸಲು ಚಿಂತನೆ: ಕೋಟ ಶ್ರೀನಿವಾಸ ಪೂಜಾರಿ
ಮಲ್ಪೆ, ಅ.6: ಬೈಂದೂರಿನಿಂದ ಮಂಗಳೂರಿನ ಉಳ್ಳಾಲದವರೆಗೆ ಕಡಲ ಕಿನಾರೆಯಲ್ಲಿ ಪ್ರಯಾಣಿಕರ ಬೋಟನ್ನು ಪ್ರಾರಂಭಿಸುವ ಚಿಂತನೆ ಇದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ಅದಾನಿ ಪೋರ್ಟ್ಸ್ ಮತ್ತು ಎಸ್‌ಇಝೆಡ್‌ನ ಅಂಗ ಸಂಸ್ಥೆಯಾದ ಓಷಿಯನ್ ಸ್ಪಾರ್ಕಲ್ ಲಿಮಿಟೆಡ್‌ಗಾಗಿ ನಿರ್ಮಿಸಲಾದ 70 ಟನ್ ಬೊಲ್ಲಾರ್ಡ್ ಫುಲ್ ಟಗ್(ಹಡಗು)ನ ಉದ್ಘಾಟನೆ ಯನ್ನು ಸೋಮವಾರ ಮಲ್ಪೆಯ ಶಿಪ್ ಬಿಲ್ಡಿಂಗ್ ಯಾರ್ಡ್‌ನಲ್ಲಿ ನೆರವೇರಿಸಿ ಅವರು ಮಾತನಾಡುತಿದ್ದರು.
ಹೆದ್ದಾರಿಗೆ ಪರ್ಯಾಯವಾಗಿ ಸಮುದ್ರ ಕಿನಾರೆಯಲ್ಲಿ ವಾಟರ್ ಮೆಟ್ರೋ ಮಾದರಿಯಲ್ಲಿ ಈ ಪ್ರಯಾಣಿಕರ ಹಡಗು ಆರಂಭಿಸಬೇಕೆಂಬುದು ನಮ್ಮ ಗುರಿಯಾಗಿದೆ. ಅದಕ್ಕಾಗಿ ಕೇಂದ್ರ ಸರಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಯಾಣಿಕರ ಹಡಗಿಗೆ ಮಂಜೂರಾತಿ ದೊರತರೆ ಅದನ್ನು ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಮೂಲಕವೇ ನಿರ್ಮಾಣ ಮಾಡಿಸಲಾಗುವುದು ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಭಾರತ ದೇಶದ ಸಮುದ್ರ ಯಾನ ಮತ್ತು ಮತ್ಸ ಸಂಪದ ಯೋಜನೆಯನ್ನು ಉನ್ನತೀಕರಣ ಗೊಳಿಸಲು ಕೇಂದ್ರ ಸರಕಾರದಿಂದ 40ಸಾವಿರ ಕೋಟಿ ರೂ.ಗಳ ಯೋಜನೆ ಸಿದ್ಧವಾಗುತ್ತಿದೆ. ಇದರಿಂದ ಮೀನುಗಾರರಿಗೆ ಮತ್ತು ಮೀನುಗಾರಿಕಾ ಬೋಟುಗಳಿಗೆ ಹೆಚ್ಚು ಅವಕಾಶ ಸಿಗಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ಆ ಹಿನ್ನೆಲೆಯಲ್ಲಿ ಎಲ್ಲ ಸಂಸದರು ಅತ್ಯಂತ ತ್ವರಿತವಾಗಿ ತಮ್ಮ ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಮುದ್ರ ಕಿನಾರೆಗಳ ಬಗ್ಗೆ ಗಮನ ಹರಿಸಬೇಕೆಂದು ಪ್ರಧಾನಿ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.
ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಸಿಗಬೇಕು ಎಂಬುದು ನಮ್ಮ ಆಶಯ. ನಿಮ್ಮ ನಿಯಮಗಳನ್ನು ಗಮನದಲ್ಲಿ ಇಟ್ಟುಕೊಂಡು ಉಡುಪಿ ಜಿಲ್ಲೆಗೆ ಆದ್ಯತೆ ನೀಡಿ ಕರ್ನಾಟಕದವರಿಗೆ ಇದರಲ್ಲಿ ಅವಕಾಶವನ್ನು ಕಲ್ಪಿಸಿಕೊಡಬೇಕು. ಅದೇ ರೀತಿ ಸ್ಥಳೀಯ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಕೊಚ್ಚಿನ್ ಶಿಪ್‌ಯಾರ್ಡ್‌ನ ತಾಂತ್ರಿಕ ನಿರ್ದೇಶಕ ರಾಜೇಶ್ ಗೋಪಾಲ ಕೃಷ್ಣನ್, ಓಷಿಯನ್ ಸ್ಪಾರ್ಕಲ್‌ನ ಶಾಖಾ ಮುಖ್ಯಸ್ಥ ಮರಿಯಾ ಅನ್ಸೋನ್ ಹಾಗೂ ಪ್ರಶಾಂತ್ ನಾಯರ್ ಉಪಸ್ಥಿತರಿದ್ದರು.
ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಮುಖ್ಯಕಾರ್ಯನಿರ್ವಹಣಾಧಿ ಕಾರಿ ಹರಿ ಕುಮಾರ್ ಎ. ಸ್ವಾಗತಿಸಿದರು. ಮುಖ್ಯ ಆರ್ಥಿಕ ಅಧಿಕಾರಿ ಶಂಕರ್ ನಟರಾಜ್ ವಂದಿಸಿದರು. ಸವಿತಾ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.
60ಕೋಟಿ ರೂ. ವೆಚ್ಚದ ಈ ಹಡಗು 33 ಮೀಟರ್ ಉದ್ದ, 12.2 ಮೀಟರ್ ಅಗಲ ಮತ್ತು 4.2 ಮೀಟರ್ ಆಳ ಹೊಂದಿದ್ದು, ಎರಡು 1838 ಕಿಲೋವಾಟ್ ಸಾಮರ್ಥ್ಯದ ಎಂಜಿನ್‌ಗಳನ್ನು ಮತ್ತು 2.7 ಮೀಟರ್ ಪ್ರೊಪೆಲರ್‌ಗಳು ಹಾಗೂ ಡೆಕ್ ಉಪಕರಣಗಳನ್ನು ಹೊಂದಿವೆ.