ತೆಕ್ಕಟ್ಟೆ: ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ
ಕುಂದಾಪುರ: ಕಳೆದ 4 ತಿಂಗಳ ಹಿಂದೆ ಬಾವಿಗೆ ಬಿದ್ದು ಮೃತಪಟ್ಟ ಗಂಡ ಮತ್ತು ರಕ್ಷಿಸಲು ಹೋದ ಮಗನ ಸಾವಿನ ದುಃಖ ಹಾಗೂ ಸಾಲದಿಂದಾಗಿ ನೊಂದ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಕ್ಕಟ್ಟೆ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದಿದೆ.
ಮೃತರನ್ನು ತಾರಾ ದೇವಾಡಿಗ (54) ಎಂದು ಗುರುತಿಸಲಾಗಿದೆ.
ಮೇ ತಿಂಗಳಿನಲ್ಲಿ ಇವರ ಪತಿ ಮಾಧವ ದೇವಾಡಿಗ (55), ಅವರ ಪುತ್ರ ಪ್ರಸಾದ್ ದೇವಾಡಿಗ (22) ಬಾವಿಗೆ ಬಿದ್ದು ಮೃತಪಟ್ಟಿದ್ದರು. ಬಚಾವ್ ಮಾಡಲು ಹೋದ ತಾರಾ ದೇವಾಡಿಗರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅ.6 ರಂದು ಬೆಳಿಗ್ಗೆ 9 ಗಂಟೆಗೆ ಸಾಹೇಬ್ರಕಟ್ಟೆಗೆ ಕೆಲಸಕ್ಕೆ ಹೋಗುತ್ತೆನೆಂದು ತಿಳಿಸಿ ಹೋಗಿದ್ದ ಅವರು ರಾತ್ರಿಯಾದರೂ ಮನೆಗೆ ವಾಪಾಸ್ ಬಂದಿರಲಿಲ್ಲ. ಅ.7 ಮಂಗಳವಾರ ಬೆಳಿಗ್ಗೆ 8.30 ರ ಸುಮಾರಿಗೆ ತೆಕ್ಕಟ್ಟೆ ಪಂಚಾಯತ್ ಆವರಣದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಾರಾ ಸಾಲದ ಬಾಧೆಯಿಂದ ಹಾಗೂ ಗಂಡ ಮತ್ತು ಮಗ ಮೃತಪಟ್ಟ ಬಳಿಕ ಮಾನಸಿಕವಾಗಿ ನೊಂದಿದ್ದು ಇದೇ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಿಕರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.