ಜ.ಗವಾಯ್ ಮೇಲಿನ ಹಲ್ಲೆ; ಅಂಬೇಡ್ಕರ್ ಯುವಸೇನೆ ಪ್ರತಿಭಟನೆ
ವಕೀಲ ರಾಕೇಶ್ ಕಿಶೋರ್ ಗಡಿಪಾರಿಗೆ ಜಯನ್ ಮಲ್ಪೆ ಆಗ್ರಹ
ಉಡುಪಿ, ಅ.9: ಅಂಬೇಡ್ಕರ್ ಆಶಯಗಳ ಪ್ರತಿಪಾದಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರನ್ನು ಗುರಿಯಾ ಗಿಸಿ ಶೂ ಎಸೆದ ಸನಾತನಿ ವಕೀಲ ರಾಕೇಶ್ ಕಿಶೋರ್‌ನನ್ನು ಭಾರತದಿಂದ ತಕ್ಷಣ ಗಡಿಪಾರು ಮಾಡುವಂತೆ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.
ಇಂದು ಸಂಜೆ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ವಕೀಲನ ಪ್ರತಿಕೃತಿ ದಹಿಸಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ಭಾರತದ ಆಡಳಿತ ವ್ಯವಸ್ಥೆ ಇರುವುದು ಧಾರ್ಮಿಕ ಗ್ರಂಥಗಳ ಆಧಾರದ ಮೇಲಲ್ಲ. ಬದಲಾಗಿ ಈ ದೇಶ ಸಂವಿಧಾ ನದ ಆಧಾರದ ಮೇಲೆ ನಡೆಯುತ್ತಿದೆ. ಸಂವಿಧಾನದ ಮುಖ್ಯವಾದ ಅಂಗ ನ್ಯಾಯಾಂಗ. ಅಂಥ ನ್ಯಾಯಾಲಯ ಗಳಲ್ಲೇ ಮುಖ್ಯವಾದದ್ದು ಸರ್ವೋಚ್ಛ ನ್ಯಾಯಾಲಯ. ಇದೇ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಹಿಂದೂ ಧರ್ಮವೇ ಅಲ್ಲ ಅದೊಂದು ಜೀವನ ಪದ್ಧತಿ. ಈ ಜೀವನ ಪದ್ಧತಿ ನಿಂತಿರುವುದು ಶೃತಿಗಳ ಮತ್ತು ಸ್ಮತಿಗಳ ಮೇಲೆ ಎಂದರು.
ನ್ಯಾಯಮೂರ್ತಿ ಗವಾಯಿಯವರ ಮೇಲೆ ಶೂ ಎಸೆದ ಈ ದಾಳಿಯನ್ನು ಯಾರೂ ಸಹಿಸಲು ಸಾಧ್ಯವಿಲ್ಲ ಎಂದ ಜಯನ್ ಮಲ್ಪೆ, ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡಿದ ಘೋರ ಅವಮಾನ ಎಂದರು.
ಚಿಂತಕ ಡಾ. ಗಣನಾಥ ಎಕ್ಕಾರು ಮಾತನಾಡಿ ನಮ್ಮ ದೇಶದ ಪ್ರಜಾಪ್ರಭುತ್ವವನ್ನು ನಮ್ಮ ಸಂವಿಧಾನ ಘನತೆ ಯಿಂದ ಮುನ್ನಡೆಸುತ್ತಿದೆ. ಇಂತಹ ಅವಮಾನಕರ ಘಟನೆ ಇಡೀ ಭಾರತವನ್ನೇ ಅವಮಾನಿಸಿದಂತೆ. ನಾವು ಸಂವಿಧಾನದ ಆಶಯವನ್ನು ಉಳಿಸದೇ ಹೋದರೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದರು.
ಹಿರಿಯ ದಲಿತ ಮುಖಂಡ ಶೇಖರ ಹೆಜಮಾಡಿ ಮಾತನಾಡಿ, ದಲಿತರ ಮತ್ತು ಮಹಿಳೆಯರ ಏಳಿಗೆಯನ್ನು ಸಹಿಸದ ಮನುಸ್ಮತಿ ಎಂತಹ ಬದುಕು ನೀಡಿದೆ ಎಂಬುದನ್ನು ಗಮನಿಸಬೇಕು. ಸಂವಿಧಾನ ಬದಲಾವಣೆಗೆ ಸಂಘ ಪರಿವಾರ ಪ್ರಯತ್ನಿಸಿದರೆ ದೇಶ ದಂಗೆ ಎಳುತ್ತದೆ ಎಂದು ಎಚ್ಚರಿಸಿದರು.
ದಸಂಸ ಭೀಮವಾದದ ರಾಜ್ಯ ಸಂಘಟನಾ ಸಂಚಾಲಕ ಶೇಖರ ಹಾವಂಜೆ ಮಾತನಾಡಿ, ಭಾರತ ಇಂದು ಬುದ್ಧಮ ಯವಾಗುತ್ತಿದೆ ಇದನ್ನು ಸಹಿಸದ ಸನಾತನವಾದಿಗಳು ಇಂತಹ ದೌರ್ಜನ್ಯವನ್ನು ಸುರುಮಾಡಿದ್ದಾರೆ, ಇವರ ಕುತಂತ್ರ ಪಿತೂರಿಗೆ ದಲಿತರು ಬಲಿಯಾಗಬಾರದು ಎಂದರು.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು, ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಮಹಾಬಲ ಕುಂದರ್, ಚಾರ್ಲ್ಸ್ ಅಂಬ್ಲರ್, ಇದ್ರಿಸ್ ಹೂಡೆ, ಕೃಷ್ಣ ಬಂಗೇರ, ಲಕ್ಷ್ಮಣ ಬೈಂದೂರು, ರಾಮ ಮಯ್ಯಾಡಿ, ಹರೀಶ್ ಸಲ್ಯಾನ್, ಯುವರಾಜ್ ಪುತ್ತೂರು, ವಸಂತ ಪಾದೆಬೆಟ್ಟು, ದಯಾಕರ್ ಮಲ್ಪೆ, ಮಾಧವ ಕರ್ಕೇರ, ಸಾಧು ಚಿಟ್ಪಾಡಿ, ಧನಂಜಯ, ರವಿರಾಜ್ ಲಕ್ಷ್ಮಿನಗರ, ವಿಶ್ವನಾಥ ಹಾಳೇಕಟ್ಟೆ, ಶೋಭಾ ನಾಯ್ಕ್, ಶರತ್ ಶೆಟ್ಟಿ ತೆಂಕನಿಡಿಯೂರು, ಕಮಲ್ ಮಲ್ಪೆ, ಪುಷ್ಪ ಆಂಚನ್, ಸತೀಶ್ ಕಪ್ಪೆಟ್ಟು, ಸಂತೋಷ್ ಮೂಡುಬೆಟ್ಟು ದಾಮೋದರ ನಾಯ್ಕ, ಧನಪಾಲ್, ವಿನಯ ಕೊಡಂಕೂರು ಮುಂತಾದವರು ಭಾಗವಹಿಸಿದ್ದರು.