×
Ad

ಉಡುಪಿ: ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆಯಿಂದ ಸೌಜನ್ಯ ದಿನ

Update: 2025-10-09 21:35 IST

ಉಡುಪಿ: ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಅ.9ರಂದು ರಾಜ್ಯಾದ್ಯಂತ ನಡೆಸಲು ಕರೆ ನೀಡಿರುವ ‘ಸೌಜನ್ಯ ದಿನ- ನ್ಯಾಯಕ್ಕಾಗಿ ಜನಾಗ್ರಹ ದಿನ’ದಲ್ಲಿ ಇಂದು ಸಂಜೆ ಉಡುಪಿ ಹಳೇ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿ ಸೌಜನ್ಯಳಿಗೆ ನ್ಯಾಯಕ್ಕಾಗಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಸೌಜನ್ಯ ಕೊಲೆ ನಡೆದು ಇಂದಿಗೆ 13 ವರ್ಷ ಕಳೆದರೂ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದಿ ರುವುದು ವ್ಯವಸ್ಥೆಯ ದುರಂತವಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದ ನೂರಾರು ಅಸಹಜ ಸಾವುಗಳಿಗೂ ನ್ಯಾಯ ಸಿಕ್ಕಿಲ್ಲ. ಆರೋಪಿಗಳ ಪತ್ತೆ ಆಗಿಲ್ಲ ಎಂದರೆ ಇದರ ಹಿಂದೆ ಧರ್ಮದ ರಾಜಕಾರಣ ಮಾಡುವ ಅಧರ್ಮಿಗಳು, ಹಣ, ಅಧಿಕಾರ, ತೋಳ್ಬಲ ಹೊಂದಿರುವ ಧರ್ಮೋಧ್ಯಮಿಗಳಿಂದ ನ್ಯಾಯ ಸಿಕ್ಕಿಲ್ಲವೇ ಎಂಬ ಸಂಶಯ ಮೂಡಿದೆ. ಇಂತಹ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಜನಾಗ್ರಹ ಮೂಲಕ ಹೋರಾಟ ತೀವ್ರಗೊಳಿಸಬೇಕು ಎಂದು ಕರೆ ನೀಡಿದರು.

ಧರ್ಮಸ್ಥಳ ಸುತ್ತಮುತ್ತ ಬಡವರ, ದಲಿತರ ಭೂಕಬಳಿಕೆ ನಡೆದ ಪ್ರಕರಣಗಳಿಗೂ ಹಾಗೂ ಭೂಮಿ ಕಳೆದುಕೊಂಡ ಸಂತ್ರಸ್ಥರ ಕುಟುಂಬಗಳ ಪ್ರಮುಖರ ಕೊಲೆಗಳಿಗೂ ನ್ಯಾಯ ಸಿಗದಿರುವುದು ಬಂಡವಾಳಶಾಹಿ ಅಧಿಕಾರದ ಪರಮಾವಧಿಯಾಗಿದೆ. ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಯನ್ನು ನಡೆಸುತ್ತಿರುವುದನ್ನು ಅಭಿನಂದಿಸಬೇಕು. ಆದರೆ ಎಸ್‌ಐಟಿ ವಿರುದ್ಧ ಷಡ್ಯಂತ್ರ ವನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ಮಾಡುತ್ತಿದ್ದು ಎಸ್‌ಐಟಿಗೆ ರಾಜ್ಯ ಸರಕಾರ ಬಲ ತುಂಬಬೇಕು. ಅಲ್ಲದೇ ಧರ್ಮಸ್ಥಳದಲ್ಲಿ ನಡೆದ ಎಲ್ಲಾ ಪ್ರಕರಣಗಳನ್ನು ಎಸ್‌ಐಟಿಗೆ ವಹಿಸಬೇಕು ಎಂದು ಕಲ್ಲಾಗರ ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ ಮಾತನಾಡಿದರು. ಕವಿರಾಜ್ ಎಸ್ ಕಾಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೊಂಬತ್ತಿ ಹಿಡಿದು ನಡೆದ ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ಸರೋಜ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ನಾಯಕ್, ದಯಾನಂದ ಕೋಟ್ಯಾನ್, ಸಯ್ಯದ್, ರಮೇಶ್ ಉಡುಪಿ, ರಾಮ ಕಾರ್ಕಡ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಸಂಜೀವ ಬಳ್ಕೂರು, ಬೀಡಿ ಸಂಘಟನೆಯ ಉಮೇಶ್ ಕುಂದರ್, ನಳಿನಿ ಹಾಗೂ ಇತರರು ಉಪಸ್ಥಿತರಿದ್ದರು.








Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News