ಪರಿಪೂರ್ಣ ಮನುಷ್ಯನಿಗೆ ಆರೋಗ್ಯದ ಅರಿವು ಅಗತ್ಯ: ನ್ಯಾ.ಕುಮಾರ್ ಜಿ.
ಕುಂದಾಪುರ, ಅ.14: ಪರಿಪೂರ್ಣ ಮನುಷ್ಯನಿಗೆ ತನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಅರಿವಿರಬೇಕಾ ಗಿದೆ. ದೇಹಸ್ಥಿತಿ, ಮಾನಸಿಕ ಸ್ಥಿತಿ ಸಮಚಿತ್ತ, ಸಮತೋಲನದಿಂದಿದ್ದಾಗ ಮನುಷ್ಯ ಸುಖವಾದ ಜೀವನ ನಡೆಸಲು ಸಾಧ್ಯವಿದೆ ಎಂದು ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್ ಜಿ. ಹೇಳಿದ್ದಾರೆ.
ಕುಂದಾಪುರ ತಾಲೂಕು ಕಾನೂನು ಸೇವೆಗಳ ಸಮಿತಿ, ಕುಂದಾಪುರ ವಕೀಲರ ಸಂಘ, ಅಭಿಯೋಗ ಇಲಾಖೆ ಹಾಗೂ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಮಂಗಳವಾರ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವ್ಯಾಯಾಮ, ಆಹಾರ ಕ್ರಮಗಳಿಂದ ದೇಹದ ಆರೋಗ್ಯ ಕಾಪಾಡಿ ಕೊಳ್ಳಬಹುದು. ಆದರೆ ಮಾನಸಿಕ ಸಮ ತೋಲನ ತೊಳಲಾಟಕ್ಕೊಳಗಾದಾಗ ಆರಂಭದಲ್ಲೇ ನುರಿತ ಚಿಕಿತ್ಸೆ ಪಡೆಯಬೇಕು ಹಾಗೂ ಯಾವುದೇ ಕಾರಣಕ್ಕೂ ಮನಸ್ಥಿತಿಯಲ್ಲಿ ಏರುಪೇರಾದಾಗ ನಿರ್ಲಕ್ಷ್ಯ ವಹಿಸಬಾರದು ಎಂದು ಅವರು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಆಡಳಿತ ನಿರ್ದೇಶಕ, ಮನೋವೈದ್ಯ ಡಾ.ಪ್ರಕಾಶ್ ಸಿ.ತೋಳಾರ್ ಮಾತನಾಡಿ, ಮಾನಸಿಕ ಒತ್ತಡಗಳು, ಖಿನ್ನತೆಯಂತಹ ಸಮಸ್ಯೆಗಳಿಂದ ಬಳಲಿ ವ್ಯಕ್ತಿಗಳು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಕ್ಕೆ ಮುಂದಾಗುತ್ತಾರೆ. ಅಗತ್ಯ ಸಮಾಲೋಚನೆ, ಚಿಕಿತ್ಸೆ ಮೂಲಕ ವ್ಯಕ್ತಿಯನ್ನು ಸರಿಪಡಿಸಲು ಸಾಧ್ಯವಿದೆ. ಆರೋಗ್ಯವಂತರಾಗಿ ಬಾಳಲು ಮನಸ್ಸಿನ ದ್ವಂದ್ವ ಆಲೋಚನೆಗಳು, ಅನಗತ್ಯ, ಅತೃಪ್ತ ವಿಚಾರಗಳನ್ನು ತೊಡೆದುಹಾಕಬೇಕು. ಮನಸ್ಸಿನಲ್ಲಿ ಸಂತಸದ ವಾತಾವರಣ ಸೃಷ್ಟಿಸಿಕೊ ಳ್ಳಬೇಕು. ವ್ಯಾಯಾಮ, ಕ್ರಮಬದ್ಧ ಜೀವನ, ಉತ್ತಮ ಗೆಳೆಯರ ಸಹವಾಸದ ಜೊತೆಗೆ, ಸಾರ್ವಜನಿಕವಾಗಿ ಬೆರೆಯುವ ಮನಸ್ಥಿತಿ ರೂಪಿಸಿಕೊಳ್ಳಬೇಕು ಎಂದರು.
ಕುಂದಾಪುರದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ, ನ್ಯಾಯಿಕ ಧಂಡಾಧಿಕಾರಿ ಶೃತಿಶ್ರೀ ಎಸ್., ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ. ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ಬಾರ್ ಅಸೋಶಿಯೇಷನ್ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ನ್ಯಾಯವಾದಿ ಶಾಜಿ ಅಬ್ರಾಹಂ ಕಾರ್ಯಕ್ರಮ ನಿರೂಪಿಸಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಖಜಾಂಚಿ ನಾಗರಾಜ್ ರಾವ್ ವಂದಿಸಿದರು.