×
Ad

ಶಶಿ ತರೀಕೆರೆಗೆ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ

Update: 2025-10-23 21:10 IST

ಉಡುಪಿ, ಅ.23: ಕವಿ ಕುರಾಡಿ ಸೀತಾರಾಮ ಅಡಿಗರ ನೆನಪಿನ ನೀಡಲಾಗುವ 2024ನೇ ಸಾಲಿನ ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗೆ ಬೆಂಗಳೂರಿನ ಕವಿ ಶಶಿ ತರೀಕೆರೆ ಅವರ ‘ಪ್ಯೂಪಾ’ ಕವನ ಸಂಕಲನ ಆಯ್ಕೆಯಾಗಿದೆ.

ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸಂಸ್ಥೆಯು ವಿಶ್ವ ಭಾರತ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಕತ್ವ ದಲ್ಲಿ ಕಳೆದ ವರ್ಷ ಈ ಪ್ರಶಸ್ತಿಯನ್ನು ನೀಡುತ್ತಿದೆ. ಈ ಬಾರಿಯ ಪ್ರಶಸ್ತಿಗಾಗಿ 2024ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಣೆಗೊಂಡ ಕವನ ಸಂಕಲನಗಳನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಪ್ರಶಸ್ತಿಗೆ ಒಟ್ಟು 88 ಕೃತಿಗಳು ಬಂದಿದ್ದು, ಕನ್ನಡ ಸಾಹಿತ್ಯ ಲೋಕದ ಹಿರಿಯ ಸಂಸ್ಕೃತಿ ಚಿಂತಕರೂ, ಲೇಖಕರೂ ಆದ ಬೆಂಗಳೂರಿನ ಶೂದ್ರ ಶ್ರೀನಿವಾಸ್ ಮತ್ತು ಪ್ರಸಿದ್ಧ ವಿಮರ್ಶಕ ಪ್ರೊ.ಎಚ್. ದಂಡಪ್ಪ ತೀರ್ಪುಗಾರ ರಾಗಿ ಸಹಕರಿಸಿದ್ದರು ಎಂದರು.

ಪ್ರಶಸ್ತಿಯು 10,000ರೂ. ಗೌರವ ನಗದಿನೊಂದಿಗೆ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ನವೆಂಬರ್ ತಿಂಗಳ ಮೂರನೇ ವಾರದಲ್ಲಿ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಶಸ್ತಿ ಸಮಿತಿ ಸಂಚಾಲಕಿ ಪೂರ್ಣಿಮಾ ಜನಾರ್ದನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ವಿಶ್ವ ಭಾರತ ಕರ್ನಾಟಕ ಪ್ರತಿಷ್ಠಾನದ ನಿರ್ದೇಶಕ ನಾರಾಯಣ ಮಡಿ ಹಾಗು ಕವಿತಾ ಎನ್ ಮಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News