×
Ad

ಕುಂದಾಪುರದ ಸಾಯಿ ಆಸ್ಪತ್ರೆಗೆ ಮಂಗಳೂರು ಕೆಎಂಸಿಯಿಂದ ತುರ್ತು ವೈದ್ಯಕೀಯ ಸೇವೆ ವಿಸ್ತರಣೆ

Update: 2025-10-23 21:56 IST

ಕುಂದಾಪುರ, ಅ.23: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಯ ಲಭ್ಯತೆಯನ್ನು ಬಲಗೊಳಿಸಲು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವು ಕುಂದಾಪುರದ ಶ್ರೀಸಾಯಿ ಆಸ್ಪತ್ರೆಯಲ್ಲಿ ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರವನ್ನು ವಿಸ್ತರಿಸಲಿದೆ. ಇದೇ ಅ.26ರಂದು ಈ ಕೇಂದ್ರ ಉದ್ಘಾಟನೆ ಗೊಳ್ಳಲಿದೆ ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಕ್ಲಸ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ ಹೇಳಿದ್ದಾರೆ.

ಕುಂದಾಪುರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಂ.ಸಿ ಆಸ್ಪತ್ರೆಯ ತುರ್ತು ವಿಭಾಗದ ತಜ್ಞರ ಸೇವೆಯನ್ನು ಕುಂದಾಪುರದ ಜನರು ಶ್ರೀಸಾಯಿ ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದು. ಈ ನಡೆ ವೈದ್ಯಕೀಯ ಸೇವೆ ಯನ್ನು ಮತ್ತಷ್ಟು ವಿಸ್ತರಿಸಿ, ಗೋಲ್ಡನ್ ಅವರ್ (ತುರ್ತು ಸಮಯ)ನಲ್ಲಿ ರೋಗಿಯನ್ನು ರಕ್ಪಿಸುವಲ್ಲಿ ಹಾಗೂ ಸೂಕ್ತ ಚಿಕಿತ್ಸೆ ಒದಗಿಸುವಲ್ಲಿ ನೆರವಾಗಲಿದೆ ಎಂದರು.

ಪುತ್ತೂರು, ಕಕ್ಕಿಂಜೆ, ಬೆಳ್ತಂಗಡಿ ಮತ್ತು ಕೇರಳದಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ನಾವು ಹೊಂದಿದ್ದೇವೆ. ಹಲವಾರು ಹೃದಯಾಘಾತ, ಸ್ಟ್ರೋಕ್, ಟ್ರಾಮಾ, ಪಾಲಿ ಟ್ರಾಮಾ, ಹಾವು ಕಡಿತ, ವಿಷ ಸೇವನೆ, ಮಕ್ಕಳ ತುರ್ತು ಚಿಕಿತ್ಸೆ ಮತ್ತು ಹಲವು ತುರ್ತು ವೈದ್ಯಕೀಯ ಪ್ರಕರಣಗಳನ್ನು ಸ್ಥಿರಗೊಳಿಸಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದರು.

ಮಲ್ಟಿ ಸ್ಪೆಷಾಲಿಟಿ ಚಿಕಿತ್ಸೆ ಅಗತ್ಯವಿದ್ದಲ್ಲಿ, ಕಾರ್ಡಿಯಾಕ್, ನ್ಯೂರೊ ಮಕ್ಕಳ ಅಥವಾ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಯನ್ನು ಮುಂದಿನ ಚಿಕಿತ್ಸೆಗಾಗಿ ಉನ್ನತ ಮಟ್ಟದ ವೈದ್ಯಕೀಯ ಆರೈಕೆಗೆ ವರ್ಗಾಯಿಸಲಾಗುವುದು. ಅಲ್ಲಿ ಉತ್ತಮವಾದ ಬಹು ವಿಭಾಗದ ಆರೈಕೆಯನ್ನು ನೀಡಲಾಗುತ್ತದೆ ಎಂದರು.

ಕುಂದಾಪುರ ಶ್ರೀಸಾಯಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ರಂಜನ್ ಶೆಟ್ಟಿ ಈ ಯೋಜನೆ ಬಗ್ಗೆ ಮಾತನಾಡಿ, ಕೆಎಂಸಿ ಆಸ್ಪತ್ರೆಯಿಂದ ಎಮರ್ಜೆನ್ಸಿ ಮೆಡಿಸಿನ್ ತಂಡದ ಅನುಭವ ಮತ್ತು ಪರಿಣತಿ ಕುಂದಾಪುರ ಮತ್ತು ಸುತ್ತಮುತ್ತಲಿನ ಜನರಿಗೆ ಸಾಕಷ್ಟು ಅನುಕೂಲಕರವಾಗಲಿದೆ. ನಾವು ಸುತ್ತಮುತ್ತಲಿನ ಪ್ರದೇಶದಿಂದ ಸ್ಟ್ರೋಕ್, ಹೃದಯಾಘಾತ, ವಿಷ ಸೇವನೆ, ಮಕ್ಕಳ ತುರ್ತು ಪ್ರಕರಣಗಳು ಮತ್ತು ರಸ್ತೆ ಅಪಘಾತ ಮುಂತಾದ ಪ್ರಕರಣಗಳನ್ನು ಪಡೆಯುತ್ತಿದ್ದೇವೆ. ಈ ಪಾಲುದಾರಿಕೆಯು ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರೋಗಿಗಳ ಆರೈಕೆಯ ವ್ಯವಸ್ಥೆಯನ್ನು ಸುಧಾರಿಸುವುದಲ್ಲದೆ, ಸಮುದಾಯದ ಆರೋಗ್ಯ ಅಗತ್ಯಗಳನ್ನು ಪೂರೈಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಮಂಗಳೂರು ಕೆಎಂಸಿ ಆಸ್ಪತ್ರೆಯ ಸೀನಿಯರ್ ಮ್ಯಾನೇಜರ್ ( ಮಾರ್ಕೆಟಿಂಗ್ ವಿಭಾಗ) ರಾಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News