×
Ad

ಭ್ರೂಣಲಿಂಗ ಪತ್ತೆ ಬಗ್ಗೆ ಮಾಹಿತಿಗೆ ಬಹುಮಾನ: ಡಾ.ಲೆಸ್ಸಿ ಲೂವಿಸ್

Update: 2025-10-24 20:28 IST

ಉಡುಪಿ, ಅ.24: ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಹಚ್ಚುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂಥ ವ್ಯಕ್ತಿ ಅಥವಾ ಸಂಸ್ಥೆಗಳ ಕುರಿತಂತೆ ಸಾರ್ವಜನಿಕರು ಮಾಹಿತಿ ನೀಡಿದಲ್ಲಿ ಸರಕಾರದ ವತಿಯಿಂದ 50,000ರೂ.ನಿಂದ 1ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುತ್ತದೆ ಎಂದು ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಅಧ್ಯಕ್ಷೆ ಡಾ.ಲೆಸ್ಸಿ ಲೂವಿಸ್ ಹೇಳಿದ್ದಾರೆ.

ನಗರದ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿ ಸಭಾಂಗಣ ದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಹಚ್ಚುವುದು ಹಾಗೂ ಹತ್ಯೆ ಮಾಡುವುದು ಕಾನೂನಿನ ಅಡಿ ಯಲ್ಲಿ ಶಿಕ್ಷಾರ್ಹ ಅಪರಾಧ ವಾಗಿದೆ. ಇಂಥ ಕೃತ್ಯಗಳು ಕಂಡುಬಂದಲ್ಲಿ ಸಾರ್ವಜನಿಕರು ಮಾಹಿತಿಗಳನ್ನು ತಕ್ಷಣ ಸೂಕ್ತ ಪ್ರಾಧಿಕಾರಕ್ಕೆ ನೀಡಲು ಮುಂದೆ ಬರಬೇಕು ಎಂದವರು ಕರೆ ನೀಡಿದರು.

ಸಮಾಜದಲ್ಲಿ ಹೆಣ್ಣು ಮಕ್ಕಳು ಜೀವಿಸಲು ಅವಕಾಶ ಮಾಡಿಕೊಡಬೇಕು. ಅವುಗಳನ್ನು ಭ್ರೂಣದಲ್ಲಿಯೇ ಹತ್ಯೆ ಮಾಡಿದ್ದಲ್ಲಿ ಲಿಂಗಾನುಪಾತದಲ್ಲಿ ತಾರತಮ್ಯ ಉಂಟಾಗುತ್ತದೆ. ಇದು ಸಮಾಜದ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಡಾ.ಲೆಸ್ಸಿ ವಿವರಿಸಿದರು.

ಭ್ರೂಣಲಿಂಗ ಪತ್ತೆ ಮಾಡುವ ವ್ಯಕ್ತಿಗಳು, ಸ್ಕ್ಯಾನಿಂಗ್ ಸೆಂಟರ್‌ಗಳು ಅಥವಾ ಆಸ್ಪತ್ರೆಗಳ ವಿರುದ್ಧ ಸಾರ್ವಜನಿಕರು ಸೂಕ್ತ ಮಾಹಿತಿ ನೀಡಿದ್ದಲ್ಲಿ ಅವರಿಗೆ ಸರಕಾರದ ವತಿಯಿಂದ 1ಲಕ್ಷ ರೂ.ವರೆಗೆ ಸೂಕ್ತ ಬಹುಮಾನ ನೀಡಲಾಗು ತ್ತದೆ. ಇದರೊಂದಿಗೆ ಮಾಹಿತಿ ನೀಡಿದವರ ಹೆಸರನ್ನು ಸಹ ಗೌಪ್ಯ ವಾಗಿ ಇಡಲಾಗುತ್ತದೆ ಎಂದವರು ಹೇಳಿದರು.

ಭ್ರೂಣಲಿಂಗ ಪತ್ತೆ ಮಾಡುವ ವೈದ್ಯಾಧಿಕಾರಿಗಳು ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳ ಮಾಲಕರುಗಳಿಗೆ ಕಾನೂನಿನ ಅಡಿಯಲ್ಲಿ ಹತ್ತು ಸಾವಿರ ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದೇ ಅಪರಾಧ ಪುನರಾವ ರ್ತನೆಯಾದಲ್ಲಿ ಐವತ್ತು ಸಾವಿರ ರೂ. ದಂಡದೊಂದಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲು ಕಾನೂನಿ ನಲ್ಲಿ ಅವಕಾಶವಿದೆ ಎಂದು ಡಾ.ಲೆಸ್ಸಿ ಲೂವಿಸ್ ಹೇಳಿದರು.

ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಸರಕಾರದ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಸ್ಕ್ಯಾನಿಂಗ್ ಯಂತ್ರ ನಿರ್ವಹಣೆ ಮಾಡಿರುವ ಬಗ್ಗೆ ರಿಜಿಸ್ಟರ್ ಹಾಗೂ ದಾಖಲೆಗಳನ್ನು ನಿಯಮಾನುಸಾರ ಮಾಡಬೇಕು. ತಪ್ಪಿದ್ದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮರಾವ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ಆಸ್ಪತ್ರೆ ರೇಡಿಯಾಲಜಿಸ್ಟ್ ಡಾ. ಆಮ್ನಾ ಹೆಗ್ಡೆ, ಕೆ.ಎಂ.ಸಿ ಮಣಿಪಾಲ ಪ್ರಸೂತಿ ತಜ್ಞ ಡಾ.ಪ್ರತಾಪ್ ಕುಮಾರ್, ಸಮಾಜ ಸೇವಕಿ ತಾರಾ ಆಚಾರ್ಯ ಹಾಗೂ ಇತರರು ಉಪಸ್ಥಿತರಿದ್ದರು.

‘ಜಿಲ್ಲೆಯಲ್ಲಿ 2025ರ ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ 1000 ಗಂಡು ಮಕ್ಕಳಿಗೆ 997 ಹೆಣ್ಣು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಲಿಂಗಾನುಪಾತ ಕಡಿಮೆ ಇರುವುದರಿಂದ ಆಗುವ ಸಾಮಾಜಿಕ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು.’

-ಡಾ.ಲೆಸ್ಸಿ ಲೂವಿಸ್, ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಅಧ್ಯಕ್ಷೆ



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News