ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ: ಕೊಡ್ಗಿ
ಕುಂದಾಪುರ, ಅ.24: ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ ತಲೆದೋರಿದ್ದು ಹಣ ಪಾವತಿಸಿ ವಾಹನ ನಿಲ್ಲಿಸುವ ಪೇ ಪಾರ್ಕಿಂಗ್ ವ್ಯವಸ್ಥೆಯಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಕುಂದಾಪುರ ನಗರದ ಪಾರ್ಕಿಂಗ್ ಸಮಸ್ಯೆ ಬಗ್ಗೆ ಗುರುವಾರ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದರಿಂದ ಸಮಸ್ಯೆಯಾಗುತ್ತಿದೆ. ಹಾಗಂತ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ದರೆ ಅದನ್ನು ಪೊಲೀಸರಿಗೂ ನಿಯಂತ್ರಿಸುವುದು ಕಷ್ಟ. ಹೀಗಾಗಿ ಮೊದಲು ವ್ಯವಸ್ಥಿತ ಪಾರ್ಕಿಂಗ್ ಮಾಡ ಬೇಕು. ಎಲ್ಲೆಲ್ಲಿ ಪಾರ್ಕಿಂಗ್ ಮಾಡಬಹುದು, ಎಲ್ಲಿ ಮಾಡಬಾರದು, ಎಲ್ಲಿ ಪೇ ಪಾರ್ಕಿಂಗ್ ಎಂದು ತೀರ್ಮಾನಿಸ ಬೇಕು. ಹಾಗಿದ್ದಾಗ ಮಾತ್ರ ಪೊಲೀಸರಿಗೆ ನಿಯಂತ್ರಿಸಲು ಆಗುತ್ತದೆ ಎಂದರು.
ಕೆಲವು ಕಡೆ ರಸ್ತೆಯ ಒಂದು ಬದಿ ಪಾರ್ಕಿಂಗ್ ವ್ಯವಸ್ಥೆ ಇರುವುದನ್ನು ಉಳಿಸಿಕೊಳ್ಳಬಹುದು, ರಸ್ತೆ ಬದಿ ಮಾರ್ಜಿನ್ ಹಾಗೂ ಪಾರ್ಕಿಂಗ್ ಮಾರ್ಕಿಂಗ್ ಪುರಸಭೆ ವತಿಯಿಂದ ಮಾಡಿಕೊಡಬೇಕು. ಹಣ ಪಾವತಿಸಿ ಪಾರ್ಕಿಂಗ್ ಕುರಿತು ಟೆಂಡರ್ ಪ್ರಕ್ರಿಯೆ ನಡೆಸಬಹುದು. ವಾಹನಗಳ ರಕ್ಷಣೆಗೆ ಸಿಸಿ ಕೆಮರಾ ಅಳವಡಿಕೆ, ಫ್ಲೈಓವರ್ ಅಡಿ ನಿರ್ವಹಣೆ, ಸ್ವಚ್ಛತೆ ಸೇರಿದಂತೆ ಕೆಲವು ನಿಬಂಧನೆಗಳನ್ನು ಹಾಕಬಹುದು. ಗಜೆಟ್ ನೋಟಿಫಿ ಕೇಶನ್‌ಗೆ ಸಂಬಂಧಪಟ್ಟಂತೆ ಮತ್ತೊಮ್ಮೆ ನಿರ್ಣಯ ಮಾಡಿ ಡಿಸಿಗೆ ಕಳುಹಿಸ ಬೇಕು. ರಸ್ತೆ ಮೇಲೆ ನಿಲ್ಲಿಸಿದರೆ ಪೊಲೀಸರು ಕೇಸು ಹಾಕಬೇಕು. ಆಗ ಪಾರ್ಕಿಂಗ್ ತಾಣದಲ್ಲಿ ನಿಲ್ಲಿಸುತ್ತಾರೆ ಎಂದು ಅವರು ತಿಳಿಸಿದರು.
ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ, ಸಂಚಾರ ಠಾಣೆ ಎಸ್ಸೈ ನೂತನ್, ವಾಹನ ನಿಲುಗಡೆಗೆ ಮಾರ್ಕಿಂಗ್, ರಸ್ತೆ ಮಾರ್ಜಿನ್ ಮಾರ್ಕಿಂಗ್ ಮಾಡಿಕೊಟ್ಟರೆ ರಸ್ತೆಯಲ್ಲೇ ನಿಲ್ಲಿಸುವ ವಾಹನಗಳಿಗೆ ದಂಡ ವಿಧಿಸ ಲಾಗುವುದು. ಈ ಹಿಂದೆ ಪುರಸಭೆಯಿಂದ ಗಜೆಟ್ ನೋಫಿಟಿಫಿಕೇಶನ್ ಗೆ ಕಳಿಸಿದ್ದು ಜಿಲ್ಲಾಧಿಕಾರಿ ಕಚೇರಿಯಿಂದ ಮರಳಿ ಬಂದಿದೆ ಎಂದರು.
ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ., ಮುಖ್ಯಾಧಿಕಾರಿ ಆನಂದ್ ಜೆ., ಲಯನ್ಸ್ ಕ್ಲಬ್ ನ ಡಾ.ರಮೇಶ್ ಶೆಟ್ಟಿ, ಅಶೋಕ್ ಬೆಟ್ಟಿನ್, ಸುಧಾಕರ ಶೆಟ್ಟಿ ಹುಂತ್ರಿಕೆ ಮೊದಲಾದವರು ಉಪಸ್ಥಿತರಿದ್ದರು.
ಫ್ಲೈಓವರ್ ಕೆಳಗೆ ಪಾರ್ಕಿಂಗ್!
ಫ್ಲೈಓವರ್ ಕೆಳಗೆ ವ್ಯವಸ್ಥಿತ ಪಾರ್ಕಿಂಗ್ ಮಾಡುವುದಕ್ಕಾಗಿಯೇ ಲಯನ್ಸ್ ಕ್ಲಬ್‌ನಿಂದ 50 ಲಕ್ಷ ರೂ. ವೆಚ್ಚದಲ್ಲಿ ಸುಂದರೀಕರಣ ಮಾಡಲಾಗಿದೆ. ಇಲ್ಲಿ 20000 ಚದರಡಿ ಜಾಗವಿದ್ದು ನೂರಾರು ದ್ವಿಚಕ್ರ, ಚತುಷ್ಚಕ್ರ ವಾಹನ ನಿಲ್ಲಿಸ ಬಹುದು. ಇಲ್ಲಿ ಪಾರ್ಕಿಂಗ್ ಮಾಡಿದರೆ ವಾಹನ ಹತ್ತಿ ಇಳಿಯು ವವರಿಗೂ ಅನುಕೂಲ, ನಗರದ ದೊಡ್ಡ ಸಮಸ್ಯೆಗೂ ಪರಿಹಾರ ಎಂದು ಲಯನ್ಸ್ ಕ್ಲಬ್ ನ ರಮಾನಂದ ಕೆ. ಹೇಳಿದರು.
ವಾಹನಗಳ ನಿಲುಗಡೆಗೆ ಮಾರ್ಕಿಂಗ್ ಮಾಡಿಕೊಡಲಾಗುವುದೆಂದು ಸದಾನಂದ ನಾವಡ, ಸ್ಥಳದಲ್ಲಿ ಸಿಬಂದಿ ಇಟ್ಟು ಹಣ ಪಾವತಿಸುವ ವ್ಯವಸ್ಥೆಯೇ ಅನುಕೂಲ ಎಂದು ಪ್ರಜ್ನೇಶ್ ಪ್ರಭು ತಿಳಿಸಿದರು. ಒಂದೇ ಬದಿ ನಿಲುಗಡೆಗೆ ಅವಕಾಶ ಭಂಡಾರ್‌ಕಾರ್ಸ್ ಕಾಲೇಜಿನ ಒಂದೇ ಬದಿ ನಿಲುಗಡೆಗೆ ಅವಕಾಶ ಮಾಡಬೇಕು. ಬೇಕಾಬಿಟ್ಟಿ ನಿಲುಗಡೆ ಯಿಂದ ಸಮಸ್ಯೆಯಾಗುತ್ತಿದೆ. ಸಾಧ್ಯವಾದರೆ ಉಚಿತ ಪಾರ್ಕಿಂಗ್ ವ್ಯವಸ್ಥೆ ಆಗಲಿ, ಹಣ ಕೊಟ್ಟು ವಾಹನ ನಿಲ್ಲಿಸುವ ವರ ಸಂಖ್ಯೆ ಕಡಿಮೆಯಾಗಿ ವಿಫಲವಾಗುವ ಸಾಧ್ಯತೆ ಇದೆ. ಹಾಗಾಗಿ ಇಲ್ಲಿ ಉಚಿತ ಪಾರ್ಕಿಂಗ್ ಇರಬೇಕು ಎಂದು ರೋಹಿಣಿ ಉದಯ ಕುಮಾರ್ ಹೇಳಿದರು.