×
Ad

ಪಾರಂಪಳ್ಳಿ: ವಿರೋಧದ ಮಧ್ಯೆ ಘನ ತ್ಯಾಜ್ಯ ಘಟಕ ಉದ್ಘಾಟನೆ

ಕಪ್ಪುಪಟ್ಟಿ ಧರಿಸಿ ಸ್ಥಳೀಯರ ಪ್ರತಿಭಟನೆ: ಬಿಗಿ ಪೊಲೀಸ್ ಬಂದೋಬಸ್ತ್

Update: 2025-10-25 19:53 IST

ಕೋಟ, ಅ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಘನ ತ್ಯಾಜ್ಯ ಘಟಕವನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಶನಿವಾರ ಪಾರಂಪಳ್ಳಿಯಲ್ಲಿ ಉದ್ಘಾಟಿಸಿದರು.

ಈ ಸಂದರ್ಭ ಘಟಕ ಉದ್ಘಾಟನೆ ವಿರೋಧಿಸಿ ಸ್ಥಳೀಯರು ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗ್ಗೆ ಕಪ್ಪು ಪಟ್ಟಿ ಧರಿಸಿ ಘಟಕದ ಸಮೀಪ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಾಂಗ್ರೆಸ್ ಜಿಲ್ಲಾ ಹಿಂದುಳಿದ ಘಟಕದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಮಾತನಾಡಿ, ಘಟಕದಿಂದ ಸ್ಥಳೀಯರಿಗೆ ಸಮಸ್ಯೆಯಾಗಲಿದ್ದು, ಪರಿಸರಕ್ಕೆ ಹಾನಿಯಾಗಲಿದೆ ಹಾಗೂ ಸಿ.ಆರ್.ಝಡ್. ಅನುಮತಿ ಇದುವರೆಗೆ ಸಿಕ್ಕಿಲ್ಲ. ಲೋಕಾಯುಕ್ತದಲ್ಲಿ ಪ್ರಕರಣ ಇತ್ಯರ್ಥಕ್ಕೆ ಬಾಕಿಯಿದೆ. ಸ್ಥಳೀಯರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಉದ್ಘಾಟನೆ ನಡೆಸಿರುವುದು ಕಾನೂನುಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯರಾದ ಮಹೇಶ್ ಪೂಜಾರಿ ಮಾತನಾಡಿ, ಮುಂದೆ ಘಟಕದ ವಿರುದ್ಧವಾಗಿ ತೀರ್ಪು ಬಂದು ಕೋಟ್ಯಾಂತರ ರೂ. ಹಾನಿಯಾದರೆ ಅದಕ್ಕೆ ಅಧಿಕಾರಿಗಳು, ಇಂದಿನ ಜನಪ್ರತಿನಿಧಿಗಳು ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಸ್ಥಳೀಯ ಹೋರಾಟಗಾರರು ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News