×
Ad

ಸಾರ್ವತ್ರಿಕ ಶಿಕ್ಷಣ ಸಾಮಾಜಿಕ ಬದಲಾವಣೆಯ ಕ್ರಾಂತಿಕಾರಿ ಅಸ್ತ್ರ: ಪ್ರೊ.ಫಣಿರಾಜ್

ಎಸ್‌ಎಫ್‌ಐ ರಾಜ್ಯಮಟ್ಟದ ಶೈಕ್ಷಣಿಕ ಜಾಥ ಉಡುಪಿಗೆ ಆಗಮನ

Update: 2025-10-28 20:13 IST

ಉಡುಪಿ, ಅ.28: ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ವತಿಯಿಂದ ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಹಾಗೂ ಹಾಸ್ಟೆಲ್ ಬಲವರ್ಧನೆಗಾಗಿ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಶೈಕ್ಷಣಿಕ ಜಾಥ ಉಡುಪಿ ಜಿಲ್ಲೆಗೆ ಆಗಮಿ ಸಿದ್ದು, ಉಡುಪಿ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಜಾಥವನ್ನು ಸ್ವಾಗತಿಸಲಾಯಿತು.

ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಚಿಂತಕ ಪ್ರೊ.ಫಣಿರಾಜ್, ಸಾರ್ವಜನಿಕ ಶಿಕ್ಷಣ ಎಂಬುದು ಸ್ವಾತಂತ್ರ ಭಾರತದ ಮುಖ್ಯ ಆಶಯವಾಗಿತ್ತು. ದೇಶದ ಪ್ರಗತಿ, ಆಧುನಿಕರಣ ಹಾಗೂ ಜಾತಿ ವ್ಯವಸ್ಥೆ, ಅಂತಸ್ತಿನ ಅಸಮಾನತೆಯನ್ನು ನಿರ್ಮೂಲನೆ ಮಾಡಲು ಸಾರ್ವಜನಿಕ ಶಿಕ್ಷಣದ ಅಗತ್ಯವನ್ನು ಕಂಡುಕೊಳ್ಳಲಾಗಿತ್ತು. ಅದಕ್ಕೆ ಸಾಮಾಜಿಕ ಕ್ರಾಂತಿ ಅಗತ್ಯ ಇತ್ತು. ಈ ದೇಶದ ಶೇ.90ರಷ್ಟು ಜನ ವರ್ಗಕ್ಕೆ ಆಧುನಿಕ ಶಿಕ್ಷಣ, ಉದ್ಯೋಗ ಹಾಗೂ ಉನ್ನತ ಸ್ಥಾನ ನೀಡುವುದು ಸಾವ್ರರ್ತಿಕ ಶಿಕ್ಷಣದ ಉದ್ದೇಶವಾಗಿತ್ತು. ಆದರೆ ಇಂದು ಬಡ ಹಾಗೂ ಕೆಳಜಾತಿ ಮಕ್ಕಳು ಶಿಕ್ಷಣ ಪಡೆಯಬಾರದೆಂಬ ಉದ್ದೇಶದಿಂದ ಸಾರ್ವತ್ರಿಕ ಶಿಕ್ಷಣವನ್ನು ವಿರೋಧಿಸುವ ವರು ಹುನ್ನಾರ ಮಾಡುತ್ತಿದ್ದಾರೆ ಎಂದರು.

ಕೇಂದ್ರ ಸರಕಾರ ಬಜೆಟ್‌ನಲ್ಲಿ ಖರ್ಚು ಮಾಡುವ ಪ್ರತಿ 100ರೂ.ನಲ್ಲಿ ಒಂದು ರೂ.ಗಿಂತ ಕಡಿಮೆ ಹಾಗೂ ರಾಜ್ಯ ಸರಕಾರವು ಪ್ರತಿ 100ರೂ.ನಲ್ಲಿ 2ರೂ. ಮಾತ್ರ ಖರ್ಚು ಮಾಡುತ್ತಿದೆ. ಇದರಿಂದ ಸಾವ್ರರ್ತಿಕ ಶಿಕ್ಷಣ ಪೂರೈಸಲು ಸಾಧ್ಯವಾಗುತ್ತಿಲ್ಲ. ಇಂದು ಸರಕಾರಿ ಶಾಲೆಗಳು ಮುಚ್ಚಲು ಸರಕಾರ ಶಿಕ್ಷಣದ ಬಗ್ಗೆ ತೋರುತ್ತಿರುವ ಅಸಡ್ಡೆಯೇ ಕಾರಣ ಎಂದು ಅವರು ಆರೋಪಿಸಿದರು.

ರಾಜ್ಯ ಸರಕಾರ ಬಜೆಟ್‌ನಲ್ಲಿ ಖರ್ಚು ಮಾಡುವ ಪ್ರತಿ 100ರೂನಲ್ಲಿ 5ರೂ. ಶಿಕ್ಷಣಕ್ಕೆ ನೀಡಿದರೆ ಎಲ್ಲ ಸರಕಾರಿ ಶಾಲೆಗಳನ್ನು ಸಕಲ ಸೌಲಭ್ಯಗಳಿಂದ ಅಭಿವೃದ್ಧಿ ಪಡಿಸಬಹುದು. ಆಗ ಶ್ರೀಮಂತರು ಕೂಡ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುತ್ತಾರೆ. ಇದರಿಂದ ಬಡವರು ಶ್ರೀಮಂತರು, ಮೇಲ್ಜಾತಿ ಹಾಗೂ ಕೆಳಜಾತಿಯವರು ಒಟ್ಟಾಗಿ ಶಿಕ್ಷಣ ಕಲಿಯಲು ಸಾಧ್ಯ ವಾಗುತ್ತದೆ. ಈ ಮೂಲಕ ಜಾತಿ ವ್ಯವಸ್ಥೆ, ಅಂತಸ್ತಿನ ಅಸಮಾನತೆಯನ್ನು ಮುರಿಯಬಹುದು. ಸಾರ್ವತ್ರಿಕ ಶಿಕ್ಷಣ ಸಮಾಜವನ್ನು ಕಾಂತ್ರಿಕಾರಿಯಾಗಿ ಬದಲಾಯಿಸುವ ಅಸ್ತ್ರವಾಗಿದೆ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಮಾತನಾಡಿ, ಬದುಕಲು ಪ್ರತಿಯೊಬ್ಬರಿಗೂ ಶಿಕ್ಷಣ ಅತೀ ಅಗತ್ಯ. ಶಿಕ್ಷಣ ವ್ಯವಸ್ಥೆ ಸರಿಯಾಗಿದ್ದರೆ ಮಾತ್ರ ನಮ್ಮ ಮುಂದಿನ ಜನಾಂಗ ಪ್ರಗತಿಯ ಹಾದಿಯಲ್ಲಿ ಸಾಗುತ್ತದೆ. ಇಂದು ಸಾವಿರಾರು ಸರಕಾರಿ ಶಾಲೆಗಳಲ್ಲಿ ಶೂನ್ಯ ದಾಖಲೀಕರಣ ಆಗುತ್ತಿದೆ. ಇದಕ್ಕೆ ಕಾರಣ ಮತ್ತು ಯಾವ ಲಾಭಿ ನಡೆಯುತ್ತಿದೆ ಎಂಬುದರ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಜಾಥ ತಂಡದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ರಾಜ್ಯಾಧ್ಯಕ್ಷ ಶಿವಪ್ಪ, ರಾಜ್ಯ ಕಾರ್ಯದರ್ಶಿ ವಿಜಯ, ರಾಜ್ಯ ಸಮಿತಿ ಸದಸ್ಯರಾದ ಅರ್ಪಿತ, ಮಣಿಭಾರತಿ, ವನಿತ್ ಹಾಜರಿದ್ದರು.

ಸಭೆಯಲ್ಲಿ ಎಸ್‌ಎಫ್‌ಐನ ಉಡುಪಿ ತಾಲೂಕು ಕಾರ್ಯದರ್ಶಿ ಕಾರ್ತಿಕ್, ಡಿವೈಎಫ್‌ಐ ಮಾಜಿ ಮುಖಂಡ ಸುರೇಶ್ ಕಲ್ಲಾಗಾರ್, ಕಾರ್ಮಿಕ ಮುಖಂಡರಾದ ಉಮೇಶ್ ಕುಂದರ್, ಶಶಿಧರ್ ಗೊಲ್ಲ, ನಳಿನಿ ಎಸ್., ರಂಗನಾಥ, ಕೃಷ್ಣ ಜನವಾದಿ ಮಹಿಳಾ ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ಸರೋಜ ಎಸ್. ಉಪಸ್ಥಿತರಿದ್ದರು .

ಎಸ್‌ಎಫ್‌ಐ ಉಡುಪಿ ಜಿಲ್ಲಾ ಮಾಜಿ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ದರು. ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯೆ ಕೃತಿಕಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News