ವಂಡ್ಸೆ ಗ್ರಾಪಂ ಕಾರ್ಯ ಇಡೀ ರಾಜ್ಯಕ್ಕೆ ಮಾದರಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ನಿರಾಮಯ ಸೊಸೈಟಿ ಸಮುದಾಯ ಉಪಶಮನ ಆರೈಕೆ ಕೇಂದ್ರಕ್ಕೆ ಚಾಲನೆ
ಕುಂದಾಪುರ, ಅ.31: ಸಾಮಾಜಿಕ ಬದ್ದತೆ ಹೊಂದಿರುವ ವಂಡ್ಸೆ ಗ್ರಾಮದ ನಿರಾಮಯ ಸೊಸೈಟಿಯ ಸೇವೆ ರಾಜ್ಯದ ಇತರ ಪಂಚಾಯತಿಗಳಿಗೂ ಮಾದರಿಯಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರೂ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ವಂಡ್ಸೆ ಕ್ಲಸ್ಟರ್ ವ್ಯಾಪ್ತಿಯ ವಂಡ್ಸೆ, ಚಿತ್ತೂರು, ಇಡೂರು-ಕುಂಜ್ಞಾಡಿ, ಆಲೂರು, ಹಕ್ಲಾಡಿ, ಹೆಮ್ಮಾಡಿ ಮತ್ತು ಕೆರಾಡಿ ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಜಂಟಿ ಸಹಭಾಗಿತ್ವದಲ್ಲಿ ನಿರಾಮಯ ಸೊಸೈಟಿ ಮೂಲಕ ಅನುಷ್ಠಾನಗೊಳ್ಳುತ್ತಿರುವ ‘ಸಮುದಾಯ ಉಪ ಶಮನ ಆರೈಕೆ ಕೇಂದ್ರ’ ವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಹಾಗೂ ಅಂಬುಲೆನ್ಸ್ ಮತ್ತು ಶೀತಲೀಕರಣ ಪೆಟ್ಟಿಗೆ ಹಸ್ತಾಂತರಿಸಿ ಅವರು ಮಾತನಾಡುತಿದ್ದರು.
ಪ್ರತಿಯೊಬ್ಬರು ಸಮಾಜ ಸೇವೆ ಮಾಡುವ ಮನೋಭಾವ ಬೆಳೆಸಿ ಕೊಳ್ಳಬೇಕು. ಸಮಾಜ ಸೇವಕರು ಸಮಾಜಕ್ಕೆ, ರಾಜ್ಯಕ್ಕೆ, ದೇಶಕ್ಕೆ ಆದರ್ಶ ರಾಗುತ್ತಾರೆ. ಆರೈಕೆ ಕೇಂದ್ರದ ಮೂಲಕ ವಂಡ್ಸೆ ಗ್ರಾಮ ಪಂಚಾಯತಿ ಸಮಾಜ ಸೇವೆ ಮಾಡುತ್ತಿದೆ ಎಂದರು.
ಜೊತೆಗೆ ವಂಡ್ಸೆ ಗ್ರಾಪಂನ ಮಾದರಿ ಘನತಾಜ್ಯ ಘಟಕ ಲಾಭವನ್ನು ಮಾಡುತ್ತಿದ್ದು, ಇದರಿಂದ ಕಸದಿಂದ ರಸ ಮಾಡುತ್ತಿದೆ. ವಂಡ್ಸೆ ಗ್ರಾಪಂನ ಕಾರ್ಯವನ್ನು ಬೇರೆ ಇತರ ಗ್ರಾಮ ಪಂಚಾಯತಿಗಳು ಬಂದು ನೋಡಬೇಕು. ನಮ್ಮ ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯತಿ ಸದಸ್ಯರನ್ನು ಇಲ್ಲಿಗೆ ಕಳುಹಿಸುವೆ. ಈ ಮಾದರಿ ನಮ್ಮೂರಲ್ಲೂ ಆಗಬೇಕು ಎಂಬುದೆ ನನ್ನ ಆಶಯವಾಗಿದೆ ಎಂದರು.
ನಿರಾಮಯ ಸೊಸೈಟಿ ಅಧ್ಯಕ್ಷ ಉದಯ್‌ಕುಮಾರ ಶೆಟ್ಟಿ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆರ್ಹರು. ಮುಂದಿನ ವರ್ಷಕ್ಕೆ ಅವರಿಗೆ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂಬುದೇ ನನ್ನ ಆಶಯ. ಈ ಸೇವೆ ನಿರಂತರವಾಗಿ ನಡೆಯಲಿ, ಅಧಿಕಾರ ಶಾಶ್ವತ ಅಲ್ಲ, ನಾವು ಮಾಡುವ ಕೆಲಸ ಕಾರ್ಯಗಳು ಶಾಶ್ವತ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಇದೇ ಸಂದರ್ಭ ದಾನಿಗಳಾದ ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ, ನಾಗರಾಜ ಮಂಜ ಮಾರಣಕಟ್ಟೆ ಮತ್ತು ಡಾ.ರಾಜೇಶ ಬಾಯರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ವಂಡ್ಸೆ ಗ್ರಾಪಂ ಅಧ್ಯಕ್ಷೆ ಗೀತಾ ಅವಿನಾಶ್, ವಿವಿಧ ಗ್ರಾಪಂ ಅಧ್ಯಕ್ಷರಾದ ಆಶಾ ಆಚಾರ್ಯ, ಜ್ಯೋತಿ, ಶಕೀಲಾ, ಸುದರ್ಶನ ಶೆಟ್ಟಿ, ರಾಜೇಶ ಎನ್.ದೇವಾಡಿಗ, ದಿವಾಕರ ಆಚಾರ್ಯ, ಜಿಪಂ ಯೋಜನಾ ನಿರ್ದೇಶಕ ವಿಜಯ ಕುಮಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಕೆ.ಜಿ., ಎಂ.ದಿನೇಶ ಹೆಗ್ಡೆ ಮೊಳಹಳ್ಳಿ, ಡಾ.ಅತುಲ್ ಕುಮಾರ್ ಶೆಟ್ಟಿ, ಮೋಹನ ಎಲ್.ಎಚ್., ನವೀನ್ ಬಾಗಲಕೋಟೆ, ರೋಶಿನಿ ಶೆಟ್ಟಿ ಅಂಪಾರು, ಮುನಿಯಾಲು ಉದಯಕುಮಾರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನಿರಾಮಯ ಸೊಸೈಟಿ ಅಧ್ಯಕ್ಷ ಉದಯ್ ಕುಮಾರ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.