×
Ad

ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪರಿಗೆ ‘ಯಕ್ಷ ಸಾಧಕ’ ಯಕ್ಷಗಾನ ಪ್ರಶಸ್ತಿ

Update: 2026-07-16 20:31 IST

ಉಡುಪಿ, ಜು.16: ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಪ್ರಾಯೋಜಿತ ಗುರು ಮಟಪಾಡಿ ವೀರಭದ್ರ ನಾಯಕ್ ನೆನಪಿನ ‘ಯಕ್ಷಸಾಧಕ ಪ್ರಶಸ್ತಿ’ಗೆ ಈ ಬಾರಿ ಉತ್ತರ ಕನ್ನಡದ ಖ್ಯಾತ ಯಕ್ಷ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಅವರು ಆಯ್ಕೆಯಾಗಿದ್ದಾರೆ ಎಂದು ಇಂದ್ರಾಳಿಯಲ್ಲಿರುವ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

25,000ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುವ ಈ ಪ್ರಶಸ್ತಿಯನ್ನು ಆಗಸ್ಟ್ ಒಂದರನ್ನು ಉಡುಪಿಯ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕದ ಅತ್ಯಂತ ಪ್ರತಿಭಾವಂತ ಮತ್ತು ಜನಪ್ರಿಯ ಸ್ತ್ರೀವೇಷಧಾರಿ ಎಂದೇ ಪ್ರಸಿದ್ಧರಾದ ಸುಬ್ರಹ್ಮಣ್ಯ ಹೆಗಡೆ ಅವರು ಹೊನ್ನಾವರ ತಾಲೂಕಿನ ಯಲಗುಪ್ಪದಲ್ಲಿವರು. ಕನ್ನಡ ಸ್ನಾತಕೋತ್ತರ ಪದವೀಧರರಾಗಿರುವ ಹೆಗಡೆ ಅವರ ಯಕ್ಷಗಾನ ಗುರು ಹೆರಂಜಾಲು ವೆಂಕಟರಮಣ ಗಾಣಿಗರು. ಗುಂಡಬಾಳ ಮೇಳ, ಮಂದಾರ್ತಿ, ಮಾರಣಕಟ್ಟೆ, ಕಮಲಶಿಲೆ, ಸಾಲಿಗ್ರಾಮ, ಹೊಸನಗರ ಮೇಳಗಳಲ್ಲಿ ತಿರುಗಾಟ ಮಾಡಿ ಪ್ರಸ್ತುತ ಪೆರ್ಡೂರು ಮೇಳದಲಿ ಯಕ್ಷಗಾನ ಕಲಾಸೇವೆಯನ್ನು ಮಾಡುತ್ತಿದ್ದಾರೆ.

ಸ್ತ್ರೀ ವೇಷಗಳಲ್ಲಿ ಪ್ರಸಿದ್ಧರಾದ ಹೆಗಡೆ ಅವರು ಮುಖ್ಯವಾಗಿ ಪ್ರಭಾವತಿ, ಮೇನಕಿ, ರಂಭೆ, ದಾಕ್ಷಾಯಣಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಯಕ್ಷಗಾನದಲ್ಲಿ ಹರಿವಾಣ ನೃತ್ಯ ಇವರ ವಿಶೇಷತೆಯಾಗಿದೆ. ವ್ಯಾಕರಣಶುದ್ಧ ಶಬ್ದೋಚ್ಚಾರ, ಪ್ರೌಢ ಮಾತುಗಾರಿಕೆ, ಯಕ್ಷಗಾನ ಶೈಲಿಯ ಕಂಠಸ್ವರ, ಪಾತ್ರದ ಚೌಕಟ್ಟಿನೊಳಗೇ ನಿರೂಪಣೆ, ನಾಜೂಕು ಅಭಿನಯದ ಮೂಲಕ ಜನಮನ್ನಣೆ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News