ಕುಂದಾಪುರ: 6 ತಿಂಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಸೆರೆ
ಕುಂದಾಪುರ, ಜು.16: ಕೊಲೆಯತ್ನ, ಕಳ್ಳತನ ಸೇರಿದಂತೆ ವಿವಿಧ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾ ಗಿದ್ದು ಕಳೆದ ಆರು ತಿಂಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಭಟ್ಕಳದಲ್ಲಿ ಬಂಧಿಸಿದ್ದಾರೆ. ಹಟ್ಟಿಯಂಗಡಿ ಗ್ರಾಮದ ಕರ್ಕಿಗುಡ್ಡೆಯ ನಿವಾಸಿ ಪ್ರಸಾದ್ ಅಲಿಯಾಸ್ ರಬಡ (22) ಬಂಧಿತ ಆರೋಪಿ.
ಪ್ರಕರಣದ ವಿವರ: ಆರೋಪಿ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 4, ಕುಂದಾಪುರ ನಗರ ಠಾಣೆಯಲ್ಲಿ 2 ಪ್ರಕರಣ ಮತ್ತು ಮಣಿಪಾಲ ಪೊಲೀಸ್ ಠಾಣೆಯಲ್ಲಿ 1ರಂತೆ ಕೊಲೆಯತ್ನ, ಕಳ್ಳತನ ಹಾಗೂ ಎನ್.ಡಿ.ಪಿಎಸ್. ಪ್ರಕರಣ ಸಹಿತ ಒಟ್ಟು 7 ಪ್ರಕರಣಗಳು ದಾಖಲಾಗಿವೆ.
ಈತನ ಮೇಲೆ ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಎನ್ಬಿಡಬ್ಲ್ಯೂ ವಾರೆಂಟ್ ಹೊರಡಿಸಿತ್ತು. 2026ರ ಫೆಬ್ರವರಿ ತಿಂಗಳಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಗಂಭೀರ ಪ್ರಕರಣ ದಾಖಲಾಗಿದ್ದು 6 ತಿಂಗಳಿನಿಂದ ಈತ ತಲೆಮರೆಸಿಕೊಂಡಿದ್ದ. ಆರೋಪಿ ಭಟ್ಕಳದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್ ಎ. ಕಾಯ್ಕಿಣಿ ಅವರ ಮಾರ್ಗದರ್ಶನದಲ್ಲಿ, ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನಿರಂಜನ್ ಗೌಡ ಮತ್ತು ಚಂದ್ರಕಲಾ ಎಂ. ಪತ್ತಾರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶ್ರೀಧರ ಪಾಟೀಲ್ ಮತ್ತು ಕಿರಣ್ ಬಿ. ಪಾಟೀಲ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬಂಧಿತ ಆರೋಪಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.