×
Ad

ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಿ: ಮಹಾಬಲೇಶ್ವರ ರಾವ್ ಕರೆ

Update: 2026-07-16 20:33 IST

ಉಡುಪಿ, ಜು.16: ಕೇವಲ ಪದವಿ ಪಡೆಯುವುದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಸಾಕಷ್ಟು ಕೌಶಲ್ಯ ಗಳ ತರಬೇತಿ ಪಡೆದಿರಬೇಕು. ಶೈಕ್ಷಣಿಕ ಪಠ್ಯದೊಂದಿಗೆ ವರ್ತಮಾನ ಕಾಲದ ಎಲ್ಲಾ ವಿದ್ಯಾಮಾನಗಳ ಅರಿವು ವಿದ್ಯಾರ್ಥಿಗಳಿಗಿರಬೇಕು ಎಂದು ಕುಂಜಿಬೆಟ್ಟಿನ ಡಾ.ಟಿಎಂಎ ಪೈ ಕಾಲೇಜ್ ಆಫ್ ಎಜ್ಯುಕೇಷನ್‌ನ ಸಮನ್ವಯಾಧಿಕಾರಿ ಡಾ.ಬಿ.ಮಹಾಬಲೇಶ್ವರ ರಾವ್ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಉಡುಪಿಯ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ವತಿಯಿಂದ ಅಂತಿಮ ಪದವಿ ಓದುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮೂರು ದಿನಗಳ ಸನಿವಾಸ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ತಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ವೃತ್ತಿ ಕೌಶಲ್ಯ ದೊಂದಿಗೆ ಶ್ರಮ ವಹಿಸಿ ದುಡಿದರೆ ಉನ್ನತ ಸ್ಥಾನಗಳು ದೊರೆಯುತ್ತವೆ. ಇದರೊಂದಿಗೆ ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ರೂಢಿಸಿ ಕೊಳ್ಳ ಬೇಕು ಎಂದು ಡಾ. ರಾವ್ ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಬ್ಯಾಂಕ್ ಅಧಿಕಾರಿ ದೇವಾನಂದ ಉಪಾಧ್ಯಾಯ, ಉದ್ಯೋಗ ಪಡೆದು ಮೇಲಧಿಕಾರಿ ಗಳ ಮೆಚ್ಚುಗೆ ಗಳಿಸುವುದಕ್ಕೆ ಮೊದಲ ಭೇಟಿಯಲ್ಲಿಯೇ ಅವರ ಮೇಲೆ ನಾವು ಬೀರುವ ಪ್ರಭಾವ, ಹಿತ-ಮಿತ ಮಾತು, ವಿನೀತ ಭಾವ ಬಹಳ ಮುಖ್ಯವಾದ ಸಂಗತಿಗಳಾಗಿವೆ ಎಂದರು.

ಎಂಜಿಎಂ ಕಾಲೇಜಿನ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕ್, ರೋಟರಿ ಸಹಾಯಕ ಗವರ್ನರ್ ಹೇಮಂತ್ ಯು. ಕಾಂತ್ ಕಲಾರಂಗ ಸಮಾಜಮುಖಿಯಾಗಿ ಮಾಡುತ್ತಿರುವ ಕೆಲಸವನ್ನು ಪ್ರಶಂಸಿಸಿದರು.

ಶಿಬಿರದ ನಿರ್ದೇಶಕ ಹುಬ್ಬಳ್ಳಿಯ ಮೈಲೈಫ್‌ನ ಸಂಸ್ಥಾಪಕ ಪ್ರವೀಣ್ ವಿ. ಗುಡಿ ಶಿಬಿರದಲ್ಲಿ ವಿದ್ಯಾರ್ಥಿಗಳು ಪಡೆಯ ಲಿರುವ ತರಬೇತಿಯ ಅಂಶಗಳನ್ನು ಪ್ರಸ್ತಾಪಿಸಿದರು. ವೇದಿಕೆಯಲ್ಲಿ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News