×
Ad

ಬ್ರಹ್ಮಾವರ: ಬೀಟ್ ಪೊಲೀಸರಿಗೆ ಜೀವ ಬೆದರಿಕೆ ಪ್ರಕರಣ; ರೌಡಿಶೀಟರ್ ನಿಖಿಲ್ ಬಂಧನ

Update: 2026-07-16 22:16 IST

ಬ್ರಹ್ಮಾವರ, ಜು.16:: ತಾಲೂಕಿನ ಹಂದಾಡಿ-ಮಟಪಾಡಿ ಗ್ರಾಮದಲ್ಲಿ ಬೀಟ್ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಹಂದಾಡಿ ಗ್ರಾಮದ ಬೇಳೂರು ಜೆಡ್ಡು ನಿವಾಸಿ, ರೌಡಿಶೀಟರ್ ನಿಖಿಲ್ ಎಂಬಾತನನ್ನು ಬ್ರಹ್ಮಾವರ ಪೊಲೀಸರು ಇಂದು ಬಂಧಿಸಿದ್ದಾರೆ.

ಪೊಲೀಸ್ ಉಪನಿರೀಕ್ಷಕರ ಸೂಚನೆಯಂತೆ ಜು.13ರಂದು ಗಸ್ತು ಕರ್ತವ್ಯದಲ್ಲಿದ್ದ ಬ್ರಹ್ಮಾವರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಕಿಶನ್ ಅವರು ಸಂಜೆ 7 ಗಂಟೆ ಸುಮಾರಿಗೆ ರೌಡಿಶೀಟರ್ ನಿಖಿಲ್‌ನನ್ನು ಪರಿಶೀಲಿಸಲು ಆತನ ಮನೆಗೆ ತೆರಳಿದ್ದರು. ಮನೆ ಬಳಿ ನಿಖಿಲ್ ಕಾಣಿಸದ ಹಿನ್ನೆಲೆಯಲ್ಲಿ ಮೊಬೈಲ್ ಮೂಲಕ ಸಂಪರ್ಕಿಸಿದಾಗ, ‘ನಾನು ಎಲ್ಲಿದ್ದರೂ ನಿನಗೆ ಯಾಕೆ? ನನ್ನ ಮನೆಗೆ ಯಾಕೆ ಬಂದಿದ್ದೀಯ? ಅಲ್ಲೇ ಇರು, ಬಂದು ನಿನ್ನನ್ನು ಕೊಂದು ಹಾಕುತ್ತೇನೆ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಇದಾದ ಬಳಿಕ ರಾತ್ರಿ 8:30ರ ಸುಮಾರಿಗೆ ಕಾನ್‌ಸ್ಟೇಬಲ್ ವಿಶ್ರಾಂತಿ ಯಲ್ಲಿದ್ದ ವೇಳೆ ನಿಖಿಲ್ ಪದೇ ಪದೇ ಕರೆ ಮಾಡಿ, ‘ನೀನು ಯಾಕೆ ನನ್ನ ಮನೆ ಹತ್ತಿರ ಬಂದಿದ್ದೀಯ? ಈಗ ಬಾ’ ಎಂದು ಅವಾಚ್ಯವಾಗಿ ನಿಂದಿಸಿ ಮತ್ತೆ ಜೀವ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ತಿಳಿಸಲಾಗಿತ್ತು.

ಸರ್ಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ನಿಖಿಲ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನಿಖಿಲ್ ವಿರುದ್ಧ ಈ ಹಿಂದೆಯೇ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ಹಾಗೂ ಒಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು ಈತ ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News