×
Ad

ಕುಂದಾಪುರ, ಬೈಂದೂರು ತಾಲೂಕು ನಾಡದೋಣಿ ಮೀನುಗಾರರ ಒಕ್ಕೂಟದಿಂದ ಸಮುದ್ರ ಪೂಜೆ

Update: 2026-07-16 22:11 IST

ಬೈಂದೂರು, ಜು.16: ಕುಂದಾಪುರ ಹಾಗೂ ಬೈಂದೂರು ತಾಲೂಕು ನಾಡದೋಣಿ ಮೀನುಗಾರರ ಒಕ್ಕೂಟದಿಂದ ಸಮುದ್ರ ಪೂಜೆ ಬುಧವಾರ ನಡೆಯಿತು. ಪ್ರತೀ ವರ್ಷದಂತೆ ಮರವಂತೆಯ ಶ್ರೀಮಹಾರಾಜ ಸ್ವಾಮಿ ವರಾಹ ದೇವಸ್ಥಾನ, ಶ್ರೀಗಂಗಾಧರೇಶ್ವರ ದೇವಸ್ಥಾನ ಹಾಗೂ ಅರಮಲಿಂಗೇಶ್ವರ ದೇವಸ್ಥಾನದಲ್ಲಿ ಮೀನುಗಾರರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀಮಹಾರಾಜ ಸ್ವಾಮಿ ವರಾಹ ದೇವಸ್ಥಾನದ ಎದುರಿನ ಸಮುದ್ರದಲ್ಲಿ ಗಂಗಾ ಪೂಜೆ ನೆರವೇರಿಸಿ, ಮತ್ಸ್ಯ ಸಮೃದ್ಧಿಗೆ ಪ್ರಾರ್ಥಿಸಿದರು. ಅರ್ಚಕರಾದ ನರಸಿಂಹ ಅಡಿಗ ಪೂಜಾ ವಿಧಿಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಬೈಂದೂರು ವಲಯದ ನಾಡ ದೋಣಿ ಮೀನುಗಾರ ಸಂಘದ ಅಧ್ಯಕ್ಷ ಕುಮಾರ ಖಾರ್ವಿ, ಗಂಗೊಳ್ಳಿ ವಲಯದ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಖಾರ್ವಿ, ಪ್ರಮುಖರಾದ ನಾಗೇಶ್ ಖಾರ್ವಿ, ಉಮೇಶ ಖಾರ್ವಿ, ಮರವಂತೆ ರಾಮ ಮಂದಿರ ಮಾಜಿ ಅಧ್ಯಕ್ಷ ಸೋಮಯ್ಯ ಖಾರ್ವಿ, ಸುರೇಶ ಖಾರ್ವಿ ಮರವಂತೆ, ಮುಖಂಡರು, ದೇವಸ್ಥಾನದ ಪ್ರಮುಖರು, ಪದಾಧಿಕಾರಿಗಳು, ಅಪಾರ ಸಂಖ್ಯೆಯ ಮೀನುಗಾರರು ಪಾಲ್ಗೊಂಡಿದ್ದರು.

ನೂರಾರು ನಾಡದೋಣಿಗಳು ಸಮುದ್ರಕ್ಕೆ: ಮೊದಲಿಗೆ ಕುಂದಾಪುರ ಹಾಗೂ ಬೈಂದೂರು ಒಕ್ಕೂಟದ ವತಿಯಿಂದ ಸಮುದ್ರ ಪೂಜೆ ನಡೆದರೆ, ಬಳಿಕ ಆಯಾಯ ಭಾಗದಲ್ಲಿ ಅಂದರೆ ಗಂಗೊಳ್ಳಿ, ಮರವಂತೆ, ಉಪ್ಪುಂದ, ಕೊಡೇರಿ, ಶಿರೂರು ವಲಯಗಳಲ್ಲಿ ಸಮುದ್ರ ಪೂಜೆ ನಡೆಯುತ್ತದೆ. ಆ ಬಳಿಕ ನಾಡದೋಣಿ ಮೀನುಗಾರರು ಕಡಲಿಗೆ ಇಳಿಯಲಿದ್ದಾರೆ.

ಕುಂದಾಪುರ, ಬೈಂದೂರು ಭಾಗದ ಕೋಡಿ, ಗಂಗೊಳ್ಳಿ, ಬೆಣ್ಗೆರೆ, ಕಂಚುಗೋಡು, ಹೊಸಪೇಟೆ, ಮರವಂತೆ, ತ್ರಾಸಿ, ಕೊಡೇರಿ, ಉಪ್ಪುಂದದ ಮಡಿಕಲ್, ಅಳ್ವೆಗದ್ದೆಯಲ್ಲಿ ಸಾವಿರಾರು ಮಂದಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿದ್ದಾರೆ. ಉಪ್ಪುಂದ ಭಾಗದಲ್ಲಿ 1,500 ನಾಡದೋಣಿಗಳಿದ್ದರೆ, ಗಂಗೊಳ್ಳಿಯಲ್ಲಿ 300 ಸಿಂಗಲ್, 35ಕ್ಕೂ ಮಿಕ್ಕಿ ಜೋಡಿ ದೋಣಿಗಳು ಸೇರಿದಂತೆ ಸುಮಾರು 600ಕ್ಕೂ ಮಿಕ್ಕಿ ನಾಡದೋಣಿ ಗಳಿವೆ. ಮರವಂತೆಯಲ್ಲಿ 100 ಜೋಡಿ ದೋಣಿ, 150ಕ್ಕೂ ಮಿಕ್ಕಿ ಸಿಂಗಲ್ ದೋಣಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News