ಅಧಿಕ ಲಾಭದ ಆಸೆಗೆ 3.89 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
ಉಡುಪಿ, ಜು.16: ಕಡಿಮೆ ಮೊತ್ತದ ಹೂಡಿಕೆ ಮಾಡಿ ಅಧಿಕ ಲಾಭಗಳಿಸುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದ ಜಾಹಿರಾತಿನ ಆಮಿಷಕ್ಕೆ ಒಳಗಾದ ವ್ಯಕ್ತಿಯೊಬ್ಬರು 3.89 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯಲ್ಲಿರುವ ಐಸಿಐಸಿಐ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಶ್ರೀನಿವಾಸ ಆಚಾರ್ ಎಂಬವರು ತಮಗಾದ ವಂಚನೆ ಬಗ್ಗೆ ಉಡುಪಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಫೇಸ್ಬುಕ್‌ನಲ್ಲಿ ಪದೇಪದೇ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಬಳಸಿಕೊಂಡು ಕೇವಲ 20 ಸಾವಿರದಿಂದ 25 ಸಾವಿರದ ವರೆಗೆ ಹೂಡಿಕೆ ಮಾಡಿದರೆ ಅಧಿಕ ಆದಾಯ ಗಳಿಸಬಹುದು ಎಂಬ ಜಾಹಿರಾತು ಪ್ರಕಟಿಸುತ್ತಿದ್ದು ಅಲ್ಲದೆ ನೀವು ಅದೃಷ್ಟವಂತರಾಗಿದ್ದರೆ ಮಾತ್ರ ಇಂದು ವಿಶೇಷ ಗುಂಪಿಗೆ ಸೇರುವ ಅವಕಾಶ ಇದೆ ಎಂದು ಕೊನೆಯ ದಿನ ಎಂಬ ಸಂದೇಶದ ಮೂಲಕ ತುರ್ತು ನಿರ್ಧಾರ ತೆಗೆದುಕೊಳ್ಳುವಂತೆ ಪ್ರೇರೇಪಿಸಲಾಗಿತ್ತು.
ಈ ಆಮಿಷಕ್ಕೆ ಒಳಗಾದ ದೂರುದಾರ 2026ರ ಜೂ. 8ರಂದು ಇದಕ್ಕೆ ಸಂಬಂಧಿಸಿದ ಗ್ರೂಪ್ ಸೇರಿದ್ದು ಬಳಿಕ ವಂಚಕರು ವಿವಿಧ ನೆಪಗಳನ್ನು ಹೇಳಿ ಹಂತ ಹಂತವಾಗಿ ಹಣ ಪಾವತಿಸುವಂತೆ ಹೇಳಿದ್ದರು. ಇದರಿಂದ ದೂರುದಾರ ವ್ಯಕ್ತಿ ವಂಚಕರ ಖಾತೆಗೆ ಒಟ್ಟು 3 ಲಕ್ಷದ 89 ಸಾವಿರದ 387 ರೂ. ಹಣವನ್ನು ವರ್ಗಾಯಿಸಿದ್ದರು.
ಕೊನೆಗೆ ಇದರಿಂದ ಮೋಸ ಹೋಗಿರುವುದು ಅರಿವಿಗೆ ಬಂದ ಮೇಲೆ ದೂರುದಾರ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.