ಪಶ್ಚಿಮ ಘಟ್ಟ ಕುರಿತ ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯಿಂದ ಜನರ ಬದುಕು ದುಸ್ತರ: ಶ್ರೀಧರ ಗೌಡ ಈದು ಟೀಕೆ
ಉಡುಪಿ, ಆ.6: ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರಕಾರ ಹೊರಡಿಸಿ ರುವ ಕರಡು ಅಧಿಸೂಚನೆ ಜಾರಿಗೊಂಡರೆ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯ ಜನರ ಬದುಕು ದುಸ್ತರ ವಾಗಲಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಮೂಲ ಬುಡಕಟ್ಟು ಒಕ್ಕೂಟದ ಕೋರ್ ಕಮಿಟಿ ಸದಸ್ಯ ಹಾಗೂ ರಾಜ್ಯ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಕಳವಳ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ದಿನದಿಂದ ಈ ಭಾಗದಲ್ಲಿ ಮೂಲಭೂತ ಸೌಕರ್ಯಗಳಿಗೆ ದೊಡ್ಡಮಟ್ಟದ ಹಿನ್ನಡೆಯಾಗಿದ್ದು, ಜನ ಇದರ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಮತ್ತೆ ಗಾಯದ ಮೇಲೆ ಬರೆ ಎಂಬಂತೆ ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಲು ಮುಂದಾಗಿರೋದು ಈ ಭಾಗದ ಜನರಲ್ಲಿ ಆತಂಕ ಉಂಟಾಗಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅತಿ ಶೀಘ್ರ ಜನರ ಬದುಕಿಗೆ ತೊಂದರೆಯಾಗದಂತೆ ವಿರೋಧ ನಿರ್ಣಯವನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು. ಜನ ಬೀದಿಗಿಳಿದು ಹೋರಾಟ ಮಾಡುವುದಕ್ಕೆ ಮೊದಲು ಸರಕಾರ ಕಾರ್ಯಪ್ರವೃತ್ತ ಆಗಬೇಕು ಎಂದವರು ಆಗ್ರಹಿಸಿದ್ದಾರೆ.
ಈ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಘೋಷಣೆಯಾದಾಗ ಜನನಿಬಿಡ ಪ್ರದೇಶವನ್ನು ವಿರಹಿತಪಡಿಸಿ ಘೋಷಿಸಬೇಕೆಂದು ಜನರ ಅಭಿಪ್ರಾಯವಿತ್ತು. ಆದರೆ ಅದಕ್ಕೆ ಯಾವುದೇ ಮನ್ನಣೆ ಸಿಕ್ಕಿರಲಿಲ್ಲ ಎಂದಿರುವ ಅವರು, ಇಂಥ ಘೋಷಣೆಗಳು ಜನನಿಬಿಡ ಪ್ರದೇಶವನ್ನು ವಿರಹಿತಪಡಿಸಿ ಆಗಬೇಕಾಗಿದೆ ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.