×
Ad

ಉಡುಪಿ: ಮಾ.16ರಂದು ಮಕ್ಕಳ ಯಕ್ಷಗಾನ ರಂಗಭೂಮಿ ವಿಚಾರಗೋಷ್ಠಿ

Update: 2025-03-14 20:50 IST

ಕೋಟ, ಮಾ.14: ಯಕ್ಷಗಾನವನ್ನು ಪ್ರಥಮ ಬಾರಿಗೆ ವಿದೇಶಕ್ಕೊಯ್ದ ಖ್ಯಾತಿಯನ್ನು ಹೊಂದಿರುವ ಕೋಟದ ಸಾಲಿಗ್ರಾಮ ಮಕ್ಕಳ ಮೇಳವು ತನ್ನ ಐವತ್ತರ ಸಂಭ್ರಮದಲ್ಲಿ ‘ಸುವರ್ಣ ಪರ್ವ- 8’ ರ ಅಂಗವಾಗಿ ಉಡುಪಿಯ ಯಕ್ಷಗಾನ ಕಲಾರಂಗದ ಸಹಯೋಗದೊಂದಿಗೆ ‘ಮಕ್ಕಳ ಯಕ್ಷಗಾನ ರಂಗ ಭೂಮಿ’ ಕುರಿತ ಒಂದು ದಿನದ ವಿಚಾರಗೋಷ್ಠಿ ಹಾಗೂ ಮಕ್ಕಳ ಯಕ್ಷಗಾನ ಪ್ರದರ್ಶನವನ್ನು ಮಾ.16ರ ರವಿವಾರ ಆಯೋಜಿಸಿದೆ.

ಯಕ್ಷಗಾನ ಕಲಾರಂಗದ ನೂತನ ಐವೈಸಿ ಸಭಾಂಗಣದಲ್ಲಿ ನಡೆಯುವ ಈ ವಿಚಾರಗೋಷ್ಠಿಯನ್ನು ಬೆಳಗ್ಗೆ 10  ಗಂಟೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ಎಂ ರಾವ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಯಕ್ಷಗಾನ ವಿದ್ವಾಂಸ ಎಂ. ಪ್ರಭಾಕರ ಜೋಷಿ ಪ್ರಧಾನ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಉಡುಪಿಯ ಉದ್ಯಮಿ ಸುರೇಶ್ ಪ್ರಭು, ವಿಜಯಾಬ್ಯಾಂಕ್‌ನ ನಿವೃತ್ತ ಪ್ರಬಂಧಕ ಭುವನಪ್ರಸಾದ ಹೆಗ್ಡೆ, ಉಡುಪಿಯ ವಿ.ಜಿ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್.ಶ್ರೀಧರ ಹಂದೆ, ಅಧ್ಯಕ್ಷ ಬಲರಾಮ ಕಲ್ಕೂರ, ಕಾರ್ಯಾಧ್ಯಕ್ಷ ಮಹೇಶ್ ಉಡುಪ ಕೆ, ಉಪಾಧ್ಯಕ್ಷ ಜನಾರ್ದನ ಹಂದೆ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಬಿ.ಕೇಶವ ಬಡಾನಿಡಿ ಯೂರು ಇವರನ್ನು ‘ಸುವರ್ಣ ಪರ್ವ’ ಗೌರವದೊಂದಿಗೆ ಪುರಸ್ಕರಿಸಲಾಗುವುದು.

ಬೆಳಗ್ಗೆ 11:00ರಿಂದ ಯಕ್ಷಗಾನ ಪ್ರಾಚಾರ್ಯ ಗುಂಡ್ಮಿ ಸದಾನಂದ ಐತಾಳ ಅವರ ಅಧ್ಯಕ್ಷತೆಯಲ್ಲಿ ‘ಮಕ್ಕಳ ಯಕ್ಷಗಾನ-ಪ್ರಸಂಗ ಸಾಹಿತ್ಯ’ ಎಂಬ ವಿಚಾರದಲ್ಲಿ ಯಕ್ಷ ಸಾಹಿತಿ ಪ್ರೊ.ಶ್ರೀಧರ ಡಿ ಡಿಸ್., ‘ಮಕ್ಕಳ ಯಕ್ಷಗಾನ ತರಬೇತಿಯ ಸವಾಲುಗಳು’ ಎಂಬ ಕುರಿತು ಯಕ್ಷ ಗುರು ಪ್ರಸಾದ ಕುಮಾರ ಮೊಗೆಬೆಟ್ಟು, ‘ಮಕ್ಕಳ ಯಕ್ಷಗಾನ ರಂಗ ಪ್ರಸ್ತುತತೆ’ ಎಂಬ ಕುರಿತು ಬ್ರಹ್ಮಾವರದ ರಂಗಕರ್ಮಿ ಅಭಿಲಾಷ ಎಸ್. ವಿಚಾರ ಮಂಡಿಸಲಿದ್ದಾರೆ. ಯಕ್ಷ ಗುರು ದೇವದಾಸ ರಾವ್ ಕೂಡ್ಲಿ, ಪತ್ರಕರ್ತೆ ರಾಜಲಕ್ಷ್ಮೀ ಕೋಡಿಬೆಟ್ಟು ಗೋಷ್ಠಿಯ ವಿಚಾರಗಳಿಗೆ ಪ್ರತಿಸ್ಪಂದನ ನೀಡಲಿದ್ದಾರೆ.

ಅಪರಾಹ್ನ 2 ಗಂಟೆಗೆ ಶ್ರೀದುರ್ಗಾ ಮಕ್ಕಳ ಮೇಳ ಕಟೀಲು ಇವರಿಂದ ರಾಜೇಶ್ ಕಟೀಲು ನಿರ್ದೇಶನದಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಮಕ್ಕಳ ಮೇಳದ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News