ಕರ್ನಾಟಕ ಕ್ರೀಡಾಕೂಟ-2025: ಜ. 21ರಿಂದ ಪ್ರಧಾನ ಆಕರ್ಷಣೆ ಅತ್ಲೆಟಿಕ್ ಸ್ಪರ್ಧೆಗಳು
ಉಡುಪಿ, ಜ.20: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಶ್ರಯದಲ್ಲಿ ಮಂಗಳೂರು, ಉಡುಪಿ ಮತ್ತು ಮಣಿಪಾಲಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ-2025ರ ಐದನೇ ದಿನವಾದ ನಾಳೆ ಯಿಂದ ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕೂಟದ ಪ್ರಧಾನ ಆಕರ್ಷಣೆಯಾದ ಅತ್ಲೆಟಿಕ್ ಸ್ಪರ್ಧೆಗಳು ಪ್ರಾರಂಭಗೊಳ್ಳಲಿವೆ.
ಮುಂದಿನ ಮೂರು ದಿನಗಳ ಕಾಲ ರಾಜ್ಯದ ಅಗ್ರಶ್ರೇಣಿಯ 8ರಿಂದ 12 ಮಂದಿ ಅತ್ಲೇಟ್‌ಗಳು ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಉಡುಪಿಯ ಕ್ರೀಡಾಸಕ್ತರು ಮುಂದೆ ಪ್ರದರ್ಶಿಸಲಿದ್ದಾರೆ. ಸ್ಪರ್ಧೆಗಳು ಪ್ರತಿದಿನ ಬೆಳಗ್ಗೆ 8:30-9:00ಕ್ಕೆ ಪ್ರಾರಂಭಗೊಂಡು ಅಪರಾಹ್ನ 12:00ಗಂಟೆಗೆ ಮುನ್ನ ಮುಕ್ತಾಯಗೊಳ್ಳಲಿವೆ. ಬಿಸಿಲು ಹೆಚ್ಚುವ ಕಾರಣ ಆ ಬಳಿಕ ಯಾವುದೇ ಸ್ಪರ್ಧೆ ಇರುವುದಿಲ್ಲ.
ಮೊದಲ ದಿನವಾದ ನಾಳೆ ಒಟ್ಟು 13 ಫೈನಲ್‌ಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ 200ಮೀ. ಸ್ಪ್ರಿಂಟ್(ಬೆಳಗ್ಗೆ 11:00ಕ್ಕೆ ಫೈನಲ್) , 110ಮೀ. ಹರ್ಡಲ್ಸ್ (10:15ಕ್ಕೆ), 800ಮೀ(9:20), 10,000ಮೀ. (8:30), ಡಿಸ್ಕಸ್ ತ್ರೋ (8:30), ಲಾಂಗ್‌ಜಂಪ್ (9:00), ಪೋಲ್‌ವಾಲ್ಡ್(9:30) ಸ್ಪರ್ಧೆಗಳು ನಡೆಯಲಿವೆ.
ಅದೇ ರೀತಿ ಮಹಿಳೆಯರ ವಿಭಾಗದಲ್ಲಿ 200ಮೀ. ಸ್ಪ್ರಿಂಟ್(10:45), 100ಮೀ. ಹರ್ಡಲ್ಸ್(10:00), 800ಮೀ.(9:15), ಲಾಂಗ್‌ಜಂಪ್ (10:30), ಶಾಟ್‌ಪುಟ್ (9:30) ಹಾಗೂ ಜಾವೆಲಿನ್ ಎಸೆತ (10:00) ಸ್ಪರ್ಧೆಗಳು ನಡೆಯಲಿವೆ. ಇವುಗಳಲ್ಲಿ 200ಮೀ. ಓಟದಲ್ಲಿ ಮಾತ್ರ ಮಹಿಳೆಯರ ವಿಭಾಗದಲ್ಲಿ (9:30) ಎರಡು ಹಾಗೂ ಪುರುಷರ ವಿಭಾಗದಲ್ಲಿ (9:40) ಮೂರು ಹೀಟ್ಸ್‌ಗಳು ನಡೆಯಲಿವೆ.
200ಮೀ.ನಲ್ಲಿ ದಕ್ಷಿಣ ಕನ್ನಡದ ದಯಾನಂದ, ಮಹಾಂತೇಶ ಉಡುಪಿಯ ಅಂಕಿತ್ ಜೋಗಿ, ಧನುಷ್ ಡಿ ಅವರು ಸ್ಪರ್ಧಾಕಣದಲ್ಲಿದ್ದರೆ, ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಕನ್ನಡದ ರೀತುಶ್ರೀ, ಉಡುಪಿಯ ಜ್ಯೋತಿಕಾ, ಶಾರದಾ ಕುಂದರ್, ಸ್ತುತಿ ಶೆಟ್ಟಿ ಅವರು ಪದಕಕ್ಕಾಗಿ ಓಡಲಿದ್ದಾರೆ.
ಅದೇ ರೀತಿ 100ಮೀ. ಹರ್ಡಲ್ಸ್‌ನಲ್ಲಿ ದ.ಕ.ದ ಎಂ.ಎಸ್.ಚೈತನ್ಯ, ಡಿ.ಬಿ.ಶಬರಿ, ದೀಕ್ಷಿತಾ ರಾಮಕೃಷ್ಣ ಉಡುಪಿಯ ಅಕ್ಷತಾ ಹಾಗೂ ರಕ್ಷಿತಾ ಸೇರಿ ಎಂಟು ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಪುರುಷರ 110 ಮೀ.ಹರ್ಡಲ್ಸ್‌ನಲ್ಲಿ ಉಡುಪಿಯ ಸುಶಾಂತ್, ದ.ಕ.ದ ತಜಲ್ ಕೆ.ಆರ್. ನಾಳೆ ಸ್ಪರ್ಧಿಸಲಿದ್ದಾರೆ.
ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಉಡುಪಿಯ ಶ್ರೀದೇವಿಕಾ ವಿ.ಎಸ್., ಪವಿತ್ರ ಜಿ., ದಕದ ಐಶ್ವರ್ಯ ಪಾಟೀಲ್, ಸಿಂಚನ ಹಾಗೂ ಜೊಯ್ಲಿನ್ ಲೋಬೊ ನಾಳೆ ಸ್ಪರ್ಧಿಸುವ ಅರ್ಹತೆ ಪಡೆದಿದ್ದಾರೆ. ಮಹಿಳೆಯರ ಜಾವೆಲಿನ್ ಎಸೆತದಲ್ಲಿ ದಕ್ಷಿಣ ಕನ್ನಡದ ಸಿಂಚನ, ಜೀವಿತಾ ಡಿ ಹಾಗೂ ರಮ್ಯಶ್ರೀ ಜೈನ್ ಉಡುಪಿಯ ಶ್ರಾವ್ಯ ಸೇರಿ ಐವರು ಸ್ಪರ್ಧಾಕಣದಲ್ಲಿದ್ದಾರೆ.