×
Ad

‘ಯುಪಿಸಿಎಲ್‌ನಿಂದ ಕರಾವಳಿ ಜಿಲ್ಲೆಗಳಿಗೆ 24 ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡಲೇಬೇಕು’

Update: 2025-03-15 22:30 IST

ಉಡುಪಿ, ಮಾ.15: ಜಿಲ್ಲೆಯ ಪಡುಬಿದ್ರಿ ಬಳಿ ಕಾರ್ಯಾಚರಿಸುತ್ತಿರುವ ಅದಾನಿ ಪವರ್ ಲಿ. (ಕಲ್ಲಿದ್ದಲು ಆಧಾರಿತ ಉಡುಪಿ ಉಷ್ಣ ವಿದ್ಯುತ್ ಸ್ಥಾವರ-ಯುಪಿಸಿಎಲ್) ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಿಗೆ (ಉಡುಪಿ ಮತ್ತು ಮಂಗಳೂರು) ದಿನದ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಸರಬ ರಾಜು ಮಾಡಬೇಕು ಎಂದು ಮುಂಬಯಿ ಮೂಲದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಿದೆ ಎಂದು ಸಮಿತಿಯ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯ ಸತತ ಹೋರಾಟದ ಬಳಿಕ ಯುಪಿಸಿಎಲ್‌ನ 1300ಮೆಗಾ ವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರ 2010ರಿಂದ ಕಾರ್ಯಾಚರಣೆ ಪ್ರಾರಂಭಿಸಿದ್ದು, ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಕರಾವಳಿ ಜಿಲ್ಲೆಗಳಿಗೆ ನೀಡಿ ಉಳಿದುದನ್ನು ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ನೀಡಬೇಕು ಎಂದು ಸಮಿತಿ ಅಂದಿನ ಇಂಧನ ಸಚಿವ ಕೆ.ಎಸ್.ಈಶ್ವರಪ್ಪರ ಬಳಿ ಆಗ್ರಹಿಸಿದ್ದು, ಸರಕಾರ ಹಾಗೂ ಕಂಪೆನಿ ಇದಕ್ಕೆ ಒಪ್ಪಿಗೆಯನ್ನೂ ಸೂಚಿಸಿತ್ತು ಎಂದು ಜಯಕೃಷ್ಣ ಶೆಟ್ಟಿ ತಿಳಿಸಿದರು.

ಈಗ ಇಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ.45ರಷ್ಟು ರಾಜ್ಯದ ರಾಜಧಾನಿ ಬೆಂಗಳೂರಿಗೆ ಸರಬ ರಾಜು ಆಗುತಿದ್ದು, ಅವಳಿ ಜಿಲ್ಲೆಗಳಿಗೆ ದಿನ 24 ಗಂಟೆ ವಿದ್ಯುತ್ ಸರಬರಾಜು ಆಗುತ್ತಿಲ್ಲ ಎಂಬುದು ಅತ್ಯಂತ ದು:ಖದ ಸಂಗತಿ. ಇಲ್ಲಿನ ನೆಲ,ಜಲ ಬಳಸಿಕೊಂಡಿರುವ ಕಂಪೆನಿ ಕರಾವಳಿಯ ಅಭಿವೃದ್ಧಿಗೆ ಮೂಲಧಾತುವಾದ ವಿದ್ಯುತ್ ಸರಬರಾಜಿನಲ್ಲಿ ಅವಳಿ ಜಿಲ್ಲೆ ಗಳಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಅವರು ಒತ್ತಾಯಿಸಿದರು.

ನಾಗಾರ್ಜುನ/ಲ್ಯಾಂಕೋ/ಯುಪಿಸಿಎಲ್ ವಿದ್ಯುತ್ ಸ್ಥಾವರ ಪ್ರಾರಂಭ ಗೊಂಡ ಬಳಿಕ ಜಿಲ್ಲೆ ಭಾರೀ ಅಭಿವೃದ್ಧಿ ಕಂಡಿದ್ದು, ಇದಕ್ಕಾಗಿ ಹೋರಾಡಿದ ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಹೆಮ್ಮೆಯ ಸಂಗತಿ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ವಿದ್ಯುತ್ ಲಭ್ಯತೆ ಅತ್ಯಗತ್ಯ ವಾಗಿದ್ದು, ಇದಕ್ಕಾಗಿ ಸಮಿತಿಯ ನಿಯೋಗವೊಂದು ಬೆಂಗಳೂರಿಗೆ ತೆರಳಿ ಸಚಿವ ಕೆ.ಜೆ.ಜಾರ್ಜ್‌ರೊಂದಿಗೆ ಚರ್ಚಿಸಲಿದೆ ಎಂದು ಜಯಕೃಷ್ಣ ಶೆಟ್ಟಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಜಿಲ್ಲಾ ಉಪಾದ್ಯಕ್ಷ ಪ್ರೊ.ಶಂಕರ್, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News