ಉಡುಪಿ ಜಿಲ್ಲೆಯಲ್ಲಿ 28 ಪರೀಕ್ಷಾ ಕೇಂದ್ರ, 16,203 ಪರೀಕ್ಷಾರ್ಥಿಗಳು: ಡಿಸಿ ವಿದ್ಯಾಕುಮಾರಿ
ಡಿಸಿ ವಿದ್ಯಾಕುಮಾರಿ
ಉಡುಪಿ, ಫೆ.28: ವೃತ್ತಿಪರ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಅತ್ಯಂತ ಮಹತ್ವದ್ದಾದ ದ್ವಿತೀಯ ಪಿಯುಸಿ ಪರೀಕ್ಷೆ ಶನಿವಾರದಿಂದ ರಾಜ್ಯಾದ್ಯಂತ ಪ್ರಾರಂಭಗೊಳ್ಳಲಿದೆ. 2024ರಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಉಡುಪಿ ಜಿಲ್ಲೆಯಿಂದ ಈ ಬಾರಿ ಒಟ್ಟು 16,203 ಮಂದಿ ಪರೀಕ್ಷಾರ್ಥಿಗಳು (ವಿದ್ಯಾರ್ಥಿಗಳು) 28 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷೆ ಬರೆಯುವ 16,203 ವಿದ್ಯಾರ್ಥಿಗಳಲ್ಲಿ ಹೊಸದಾಗಿ ಪರೀಕ್ಷೆ ಬರೆಯುವವರು (ಫ್ರೆಶರ್) 15,685 ವಿದ್ಯಾರ್ಥಿಗಳಾದರೆ, 351 ಮಂದಿ ಖಾಸಗಿಯಾಗಿ ಪರೀಕ್ಷೆ ಬರೆಯಲಿದ್ದಾರೆ. 163 ಮಂದಿ ಪುನರಾವರ್ತಿತರು ಪರೀಕ್ಷೆ ಬರೆದರೆ, ನಾಲ್ವರು ತಮ್ಮ ಅಂಕಗಳನ್ನು ಉತ್ತಮ ಪಡಿಸಿಕೊಳ್ಳಲು ಈ ಬಾರಿಯೂ ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ಈ ಬಾರಿ ವಿಜ್ಞಾನ ವಿಭಾಗದಿಂದ 7,728 ಮಂದಿ ಪರೀಕ್ಷೆ ಬರೆಯಲಿದ್ದರೆ, ಕಾಮರ್ಸ್ ವಿಭಾಗದಿಂದ 7,246 ಮಂದಿ ಹಾಗೂ ಕಲಾ ವಿಭಾಗದಿಂದ 1230 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಯಾವುದೇ ರೀತಿಯಲ್ಲಿ ಗೊಂದಲ, ಸಮಸ್ಯೆಗಳಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗುವಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡುವಂತೆ ಈಗಾಗಲೇ ಸಂಬಂಧಿತರ ಸಭೆ ಕರೆದು ಸ್ಪಷ್ಟ ಸೂಚನೆ ನೀಡಲಾಗಿದೆ. ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ನೋಡಿಕೊಳ್ಳಲು ಅಧೀಕ್ಷಕರು, ಸಹ ಮುಖ್ಯ ಅಧೀಕ್ಷಕರು ಹಾಗೂ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎಲ್ಲಾ ಕೇಂದ್ರಗಳಲ್ಲಿ ವೆಬ್-ಕಾಸ್ಟಿಂಗ್: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮತ್ತು ಜಿಲ್ಲಾ ಕೇಂದ್ರದಿಂದ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ವಹಿಸಲು ಜಿಲ್ಲೆಯ ಎಲ್ಲಾ 28 ಪರೀಕ್ಷಾ ಕೇಂದ್ರಗಳಲ್ಲಿ ವೆಬ್-ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಮಂಡಳಿಯ ಸೂಚನೆಯಂತೆ ಎಲ್ಲಾ 28 ಪರೀಕ್ಷಾ ಕೇಂದ್ರಗಳಿಗೂ ಜಿಲ್ಲಾಧಿಕಾರಿಗಳು ವೀಕ್ಷಕರನ್ನು ನೇಮಿಸಿದ್ದಾರೆ ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ತಿಳಿಸಿದ್ದಾರೆ.
ಈ ಬಾರಿಯ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾ ಖಜಾನೆಯಲ್ಲಿ ಠೇವಣಿ ಇರಿಸಲಾಗುತ್ತದೆ. ಪರೀಕ್ಷೆ ನಡೆಯುವ ದಿನ ಅವುಗಳನ್ನು ವಿತರಿಸಲು ಎಡಿಸಿ, ಟ್ರಜರಿ ಡಿಡಿ ಹಾಗೂ ಡಿಡಿಪಿಯು ಇರುವ ತ್ರಿಸದಸ್ಯ ಸಮಿತಿ ಇದ್ದು, ಅವುಗಳನ್ನು ಮೂವರು ಸದಸ್ಯರ -ತಹಶೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಆಯಾ ಕೇಂದ್ರಗಳ ಪ್ರಾಂಶುಪಾಲರು-ತಂಡ ಅವುಗಳನ್ನು ಅದೇ ದಿನ ಬೆಳಗ್ಗೆ ಜಿಪಿಎಸ್ ಅಳವಡಿಸಿದ ವಾಹನದಲ್ಲಿ ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯಲಿದೆ. ಪರೀಕ್ಷಾ ಕೇಂದ್ರದ ಸುತ್ತಲೂ 200ಮೀ. ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿ ಮಾಡಿದ್ದು, ಅಲ್ಲಿನ ಎಲ್ಲಾ ಝೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ ಎಂದು ಡಿಡಿಪಿಯು ತಿಳಿಸಿದರು.
ಪರೀಕ್ಷಾ ದಿನಗಳಂದು ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ನೇಮಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ. ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಯ ಬಂಡಲ್‌ಗಳನ್ನು ಸುರಕ್ಷಿತವಾಗಿ ತಲುಪಿಸಲು ಸಹ ಕ್ರಮಕೈಗೊಳ್ಳಲಾಗುವುದು ಎಂದರು.
ಪರೀಕ್ಷಾ ಅವಧಿ ಕಡಿತ: ಈ ಬಾರಿಯ ಪರೀಕ್ಷೆಗಳು ಬೆಳಗ್ಗೆ 10:00ರಿಂದ ಅಪರಾಹ್ನ 1:00ಗಂಟೆಯವರೆಗೆ ನಡೆಯಲಿದೆ. ಕಳೆದ ಬಾರಿಗೆ ಹೋಲಿಸಿದರೆ ಇದು 15 ನಿಮಿಷಗಳ ಕಡಿತವಾಗಿದೆ. ಗರಿಷ್ಠ 80 ಅಂಕಗಳ ಎಲ್ಲಾ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸಲು ಮೂರು ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಪರೀಕ್ಷೆ ನಡೆಯುವ ಪ್ರತಿಯೊಂದುಇ ಕೊಠಡಿಯಲ್ಲೂ ಗಡಿಯಾರವನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪರೀಕ್ಷೆ ಬರೆಯುವ ಯಾವುದೇ ವಿದ್ಯಾರ್ಥಿಯ ಮೇಲೆ ಒತ್ತಡ ಹೇರದಂತೆ ವಿದ್ಯಾರ್ಥಿ ಸ್ನೇಹಿಯಾಗಿ ಪರೀಕ್ಷೆ ನಡೆಸುವಂತೆ ಎಲ್ಲರಿಗೂ ಸೂಚಿಸಲಾಗಿದೆ. ಯಾರಿಗೂ ಮೊಬೈಲ್‌ನ್ನು ಕೊಂಡೊಯ್ಯಲು ಅವಕಾಶವಿಲ್ಲ. ಅದೇ ರೀತಿ ಕ್ಯಾಲುಕಲೇಟರ್ ನಂಥ ಇಲೆಕ್ಟ್ರಾನಿಕ್ ಉಪಕರಣಗಳಿಗೂ ಅವಕಾಶವಿಲ್ಲ ಎಂದರು.
ಪ್ರತಿ ಕೊಠಡಿಗೂ ಸಿಸಿಟಿವಿ ಕೆಮರಾ
ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುವ ಎಲ್ಲಾ ಕೊಠಡಿಗಳಲ್ಲೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇವುಗಳ ಕಂಟ್ರೋಲ್ ರೂಮ್ ಇದ್ದು, ಇಲ್ಲಿಂದ ಎಲ್ಲಾ ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಗಳನ್ನು ವೀಕ್ಷಿಸಬಹುದಾಗಿದೆ. ಹೀಗಾಗಿ ಯಾವುದೇ ಪರೀಕ್ಷಾ ಕೇಂದ್ರದಲ್ಲೂ ಅವ್ಯವಹಾರ, ನಕಲು ನಡೆಯದಂತೆ ನೋಡಿಕೊಳ್ಳಲು ಸಾಧ್ಯವಾಗಲಿದೆ. ಇವುಗಳ ನಿಗಾಕ್ಕೆ ಉಪನ್ಯಾಸಕರನ್ನು ನೇಮಿಸಲಾಗಿದೆ. ಅಲ್ಲದೇ ರಾಜ್ಯ ಮಟ್ಟದಲ್ಲೂ ಇವುಗಳ ನೇರ ವೀಕ್ಷಣೆಗೆ ಅವಕಾಶವಿದೆ ಎಂದು ಜಿಲ್ಲಾದಿಕಾರಿ ತಿಳಿಸಿದರು.
ಅಲ್ಲದೇ ಪ್ರತಿ ಕೇಂದ್ರದಲ್ಲೂ ಬಯೋಮೆಟ್ರಿಕ್ ಮೇಷಿನ್ ಹಾಗೂ ಬಾರ್ ಕೋಡಿಂಗ್ ರೀಡರ್‌ಗಳನ್ನು ಸಹ ಅಳವಡಿಸಲಾಗಿದೆ ಎಂದವರು ನುಡಿದರು.
ವರ್ಷಾರಂಭದಿಂದಲೇ ಸಿದ್ಧತೆ
ಈ ಬಾರಿ ಮಾ.1ರಿಂದ 20ರವರೆಗೆ ನಡೆಯುವ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮತ್ತೆ ಪ್ರಥಮ ಸ್ಥಾನ ಪಡೆಯುವ ಗುರಿಯೊಂದಿಗೆ ವರ್ಷದ ಪ್ರಾರಂಭದಿಂದಲೇ ವಿವಿಧ ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಬಿದ್ದಾಗ ವಿಶೇಷ ಕ್ಲಾಸ್‌ಗಳನ್ನು ತೆಗೆದುಕೊಳ್ಳ ಲಾಗಿದೆ. ಡಿಸೆಂಬರ್ ಒಳಗೆ ಸಿಲೆಬಸ್‌ಗಳನ್ನು ಮುಗಿಸಿ ಪುನರ್‌ಮನನ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ತರಗತಿಯ ಬುದ್ಧಿವಂತ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಒಟ್ಟಾಗಿ ಅಭ್ಯಾಸ ನಡೆಸಲು ಕ್ರಮಕೈಗೊಳ್ಳಲಾಗಿದೆ ಎಂದು ಮಾರುತಿ ತಿಳಿಸಿದರು.
ಪ್ರತಿ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು, ನೋಡೆಲ್ ಅಧಿಕಾರಿಗಳನ್ನು ಕಲಿಕೆಯ ಮೇಲ್ವಿಚಾರಣೆಗೆ ನೇಮಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದವರಿಗೆ ಒಂದೆರಡು ಗಂಟೆ ಹೆಚ್ಚುವರಿ ಪಾಠ ಮಾಡಲಾಗಿದೆ. ಸರಕಾರಿ ಪ.ಪೂ.ಕಾಲೇಜು ಉಪನ್ಯಾಸಕರಿಗೆ ಎರಡು ದಿನಗಳ ವಿಶೇಷ ತರಬೇತಿ ನೀಡಲಾಗಿದೆ. ಅವರಿಗೆ ಕಾರ್ಯಾಗಾರಗಳನ್ನೂ ಹಮ್ಮಿಕೊಳ್ಳಲಾಗಿತ್ತು.
ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ/ನೀಟ್ ಪರೀಕ್ಷೆಗೆ ಕೋಚಿಂಗ್ ನೀಡಲಾಗಿದೆ. ಇದು ಅವರ ಕಲಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತಿದ್ದು, ಉತ್ತಮ ಫಲಿತಾಂಶವೂ ಸಿಗುತ್ತಿದೆ ಎಂದು ಮಾರುತಿ ತಿಳಿಸಿದರು.