×
Ad

ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಿಂದ 28ನೇ ‘ಸ್ವಚ್ಛ ಕಡಲ ತೀರ ಹಸಿರು ಕೋಡಿ ಅಭಿಯಾನ’

Update: 2023-12-31 23:04 IST

ಕುಂದಾಪುರ, ಡಿ.31: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 28ನೇ ‘ಸ್ವಚ್ಛ ಕಡಲತೀರ ಹಸಿರು ಕೋಡಿ’ ಅಭಿಯಾನ ರವಿವಾರ ಜರುಗಿತು.

ಅಭಿಯಾನಕ್ಕೆ ಚಾಲನೆ ನೀಡಿದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, "ದೇಶದ ಉಜ್ವಲ ಭವಿಷ್ಯ ನಮ್ಮ ಮುಂದಿರುವ ವಿದ್ಯಾರ್ಥಿಗಳ ಕೈಯಲ್ಲಿದೆ. ವ್ಯಕ್ತಿಯೊಬ್ಬ ಹುಟ್ಟಿದ ನಂತರ ಮಾಡುವ ಪರೋಪಕಾರಿ ಚಟುವಟಿಕೆಗಳಿಂದ ನೈಜ ಮನುಷ್ಯನಾಗುತ್ತಾನೆ. ರಾಷ್ಟ್ರಕವಿ ಕುವೆಂಪು ಅವರ ‘ವಿಶ್ವ ಮಾನವನಾಗು’ ಸಂದೇಶದ ಜೊತೆಗೆ ‘ವಿಶ್ವ ಕುಟುಂಬ’ ಪರಿಕಲ್ಪನೆಯೂ ನಮ್ಮದಾಗಬೇಕು ಎಂದು ಹೇಳಿದರು.

ಅಭಿಯಾನದಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್, ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಆಸಿಫ್ ಬ್ಯಾರಿ, ಕೋಡಿ ಚಕ್ರೇಶ್ವರಿ ದೇವಳದ ಧರ್ಮದರ್ಶಿ ಗೋಪಾಲ ಪೂಜಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು, ಶಾಲಾಭಿವೃದ್ಧಿ ಹಾಗೂ ಸಲಹಾ ಮಂಡಳಿ ಸದಸ್ಯರು ಮತ್ತು ಊರ ಪರವೂರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕಳವಾಗಿದ್ದ ಬೋಟ್ ಫ್ಯಾನ್‌ಗಳು ಪತ್ತೆ, ಮಾಲಕರಿಗೆ ಖುಷಿ


ಇಂದು ವಿದ್ಯಾರ್ಥಿಗಳು ಬೀಚ್ ಸ್ವಚ್ಛತೆಯಲ್ಲಿ ನಿರತರಾಗಿದ್ದ ವೇಳೆ ಎರಡು ತಿಂಗಳ ಹಿಂದೆ ಕಳವಾಗಿದ್ದ ಬೋಟ್ ವೊಂದರ ಎರಡು ಬೃಹತ್ ಫ್ಯಾನ್ ಗಳು ಮರಳಿನಡಿಯಲ್ಲಿ ಪತ್ತೆಯಾಗಿವೆ.

ಕೋಡಿ ನಿವಾಸಿ ಗಡಿ ಮುಹಮ್ಮದ್ ಎಂಬವರಿಗೆ ಸೇರಿದ ಬೋಟ್ ನ ಸುಮಾರು ಮೂರು ಲಕ್ಷ ರೂ. ಮೌಲ್ಯದ ಎರಡು ಬೃಹತ್ ಫ್ಯಾನ್‌ಗಳು ಎರಡು ತಿಂಗಳ ಹಿಂದೆ ಕಳವಾಗಿದ್ದವು. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಫ್ಯಾನ್ ಗಳು ಪತ್ತೆಯಾಗಿರಲಿಲ್ಲ. ಫ್ಯಾನ್ ಗಳನ್ನು ಕಳವುಗೈದವರು ಅದನ್ನು ಕೋಡಿಯ ಬೀಚ್ ನಲ್ಲಿ ಮರಳಿನಡಿ ಹೂತಿಟ್ಟಿದ್ದರು. ಇಂದು ಬೀಚ್ ಸ್ವಚ್ಛತೆಯ ವೇಳೆ ಮರಳಿನಡಿಯಲ್ಲಿ ವಿದ್ಯಾರ್ಥಿಗಳಿಗೆ ಈ ಫ್ಯಾನ್ ಗಳು ಸಿಕ್ಕಿವೆ. ಅಮೂಲ್ಯ ಫ್ಯಾನ್ ಗಳು ಪತ್ತೆಯಾಗಿದ್ದರಿಂದ ಅದರ ಮಾಲೀಕರು ಖುಷಿಯಾಗಿ ವಿದ್ಯಾರ್ಥಿಗಳಿಗೆ ಧನ್ಯವಾದ ಸಲ್ಲಿಸಿದರು.
































Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News